ಆತ್ಮೀಯ ಹಾಗೂ ಅವ್ವ ಚಿತ್ರದ ಮೂಲಕ ಕನ್ನಡದ ಚಿತ್ರಾಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದ ಸ್ಮಿತಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಈಗ ಅವರು ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದು ಅದರ ಹೆಸರನ್ನು 9 ಟು 12 ಎಂದು ಇರಿಸಲಾಗಿದೆಯಂತೆ.
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸಿ.ಪಾಟೀಲ್ ಮುಖ್ಯಪಾತ್ರದಲ್ಲಿರುವ ಈ ಚಿತ್ರದಲ್ಲಿ ನಾಯಕರಾಗಿ ಕಿಶೋರ್ ನಟಿಸುತ್ತಿದ್ದಾರೆ. ಒಂದು ರಾತ್ರಿಯಲ್ಲಿ ಏನೆಲ್ಲಾ ನಡೆಯಬಹುದು ಎನ್ನುವುದನ್ನು ತೋರಿಸುವ ಚಿತ್ರ ಇದಂತೆ. ಇದಕ್ಕೆ ಥ್ರಿಲ್ಲರ್, ಕಾಮಿಡಿ ಹಾಗೂ ಇಮೋಶನ್ ಎಲ್ಲವನ್ನೂ ಹದವಾಗಿ ಬೆರೆಸಲಾಗಿದೆಯಂತೆ.
ಚಿತ್ರವನ್ನು ಅಶೋಕ್ ಪಾಟೀಲ್ ನಿರ್ದೇಶಿಸಿದ್ದು ರಾತ್ರಿ ಹೊತ್ತಿನ ಅನುಭವ ಹೇಗಿರುತ್ತದೆ ಎನ್ನುವುದನ್ನು ನೋಡಲು ಎರಡು ರಾತ್ರಿ ಇಡೀ ಪೊಲೀಸರೊಂದಿಗೆ ಸುತ್ತಿ ಬಂದಿದ್ದಾರೆ. ಇಲ್ಲಿ ತಮಗೆ ಅಪಾರ ಅನುಭವ ಲಭಿಸಿದ್ದು, ಅದನ್ನು ಆಧರಿಸಿ ಚಿತ್ರ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಪೊಲೀಸರ ಜತೆ ಸುತ್ತಿದಾಗ ತಮಗೆ ಸಿಕ್ಕ ಅನುಭವ ಒಂದು ತೆರನಾದದ್ದು. ಅದೇ ರೀತಿ ಇನ್ನೊಮ್ಮೆ ಒಂದು ರಾತ್ರಿ ಆಟೊದಲ್ಲಿ ಸುತ್ತಿ ಬೇರೆಯದೇ ತೆರನಾದ ಅನುಭವ ಪಡೆದೆ ಎನ್ನುತ್ತಾರೆ.
ಬೆಂಗಳೂರಿನಲ್ಲಿ ತಡ ರಾತ್ರಿ ನಡೆಯುವ ಸೂಕ್ಷ್ಮಗಳು ಈ ಚಿತ್ರದಲ್ಲಿ ಬಿಂಬಿತವಾಗಿವೆಯಂತೆ. ಹಗಲು ನಾವು ಕಾಣುವ ಬೆಂಗಳೂರು ರಾತ್ರಿ ಹೊತ್ತು ಹೇಗಿರುತ್ತೆ ಅನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ರಾತ್ರಿ ದಂಧೆಗಳು, ಸಹ್ಯ ಹಾಗೂ ಅಸಹ್ಯ ಸನ್ನಿವೇಶಗಳು ಇದರಲ್ಲಿವೆಯಂತೆ. ಕಿಶೋರ್ ಟ್ಯಾಕ್ಸಿ ಡ್ರೈವರ್ ಹಾಗೂ ಬಿ.ಸಿ. ಪಾಟೀಲ್ ಖಾಕಿ ಖದರಿನಲ್ಲಿ ಗೋಚರಿಸಲಿದ್ದಾರಂತೆ.