ಕನ್ನಡದ ಮೇರು ನಟ ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಕಲ್ಯಾಣ್ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಎಕ್ಕ ಹಾಗೂ ಜರ್ನಿ ಎಂಬ ಎರಡಕ್ಷಕರದ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಿಜಕ್ಕೂ ಅದೃಷ್ಟ ಅಂದರೆ ಇದೇ ಇರಬೇಕು. ಮೊದಲ ಚಿತ್ರ ತೆರೆ ಕಾಣುವ ಮುನ್ನವೇ ಎರಡನೇ ಚಿತ್ರವೂ ಬಿಡುಗಡೆ ಆಗುತ್ತಿದೆ. ಚಿತ್ರವೊಂದರಲ್ಲಿ ನಟಿಸಿ ಬಿಡುಗಡೆ ಆಗಿ ವರ್ಷಗಳಾದರೂ ಇನ್ನೊಂದು ಚಿತ್ರದ ಆಫರ್ ಸಿಗುವುದು ಸ್ಯಾಂಡಲ್ ವುಡ್ನಲ್ಲಿ ಕಷ್ಟವಾಗಿರುವಾಗ ಭರತ್ ಕಲ್ಯಾಣ್ ಪಾಲಿಗೆ ಈ ಅವಕಾಶ ಅದೃಷ್ಟದ ರೂಪದಲ್ಲಿ ಒಲಿದು ಬಂದಿದೆ.
ಗಾಂಧಿನಗರದಲ್ಲಿ ಈಗ ಇವರದ್ದೇ ಸುದ್ದಿ. ತಂದೆಯ ಮರಣಾನಂತರ ತುಂಬಾ ಅವಧಿ ಬಿಟ್ಟು ಇವರು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ತಂದೆಯ ಜನಪ್ರಿಯತೆಯ ನೆರಳು ಎಲ್ಲೋ ಕೊಂಚ ಸಹಕಾರಿಯಾಗಬಹುದು ಎನ್ನುವುದನ್ನು ಬಿಟ್ಟರೆ ಇದೇ ಆಧಾರವಾಗುತ್ತದೆ ಎಂದು ಹೇಳಲಾಗದು. ಇವರ ಪಾಲಿಗೆ ಈ ಎರಡೂ ಚಿತ್ರಗಳು ಅತ್ಯಂತ ಮಹತ್ವದ್ದಾಗಿವೆ. ಯುವ ನಟರ ದಂಡೇ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವಾಗ ಇವರ ಪ್ರಯತ್ನ ಹೇಗೆ ಫಲ ಕೊಡುವುದೋ ದೇವರೇ ಬಲ್ಲ.
ಎಂ.ಎನ್. ಕೃಪಾಕರ್ ಸಂಗೀತ ನೀಡಿರುವ ಎಕ್ಕ ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣ ಇದೆ. ರಾಜಶೇಖರ್ ಹೆಗಡೆ ಸಂಭಾಷಣೆ ಬರೆದಿದ್ದು, ಸಾಕಷ್ಟು ಉತ್ತಮ ನಟರ ದಂಡೇ ಚಿತ್ರದಲ್ಲಿದೆ.