ಕನ್ನಡದ ಸಿಪಾಯಿ ಹಾಗೂ ಶ್ರೀ ಮಂಜುನಾಥ ಚಿತ್ರದಲ್ಲಿ ನಟಿಸಿ ಎಲ್ಲರ ಅಭಿಮಾನ ಗಳಿಸಿದ್ದ ಮೆಗಾಸ್ಟಾರ್ ಚಿರಂಜೀವಿಗೆ ಈಗ ಇನ್ನೊಂದು ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಮೂಡಿದೆಯಂತೆ.
ಹೌದು. ಇತ್ತೀಚೆಗೆ ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕಿ ರಾಧಾಳ ಚಿರಂಜೀವಿಯವರನ್ನು ನೋಡಬೇಕೆಂಬ ಆಸೆಯನ್ನು ಈಡೇರಿಸಲು ಸ್ವತಃ ತಾವೇ ಖುದ್ದಾಗಿ ಆಸ್ಪತ್ರೆಗೆ ಬಂದಿದ್ದ 'ಮೆಗಾ'ನಟ ಚಿರಂಜೀವಿ ಇಲ್ಲಿ ಸಿಕ್ಕ ಪತ್ರಕರ್ತರಿಗೆ ಹೇಳಿದ ಮಾತಿದು. ಪುಟ್ಟ ಬಾಲಕಿಗೆ ಕಣ್ಣು ಮರಳಿ ಸಿಕ್ಕ ಖುಶಿ ಒಂದೆಡೆ ಆದರೆ, ಕನ್ನಡ ನೆಲಕ್ಕೆ ಈ ನೆವದಲ್ಲಾದರೂ ಬರುವ ಅವಕಾಶ ಸಿಕ್ಕಿತಲ್ಲಾ ಅನ್ನುವ ಖುಶಿ ನನ್ನದು ಎನ್ನುತ್ತಾರೆ ಈ ಚಿರು!
MOKSHA
ಬಾಲಕಿ ರಾಧಾ ನಾರಾಯಣ ನೇತ್ರಾಲಯದ ವೈದ್ಯರಲ್ಲಿ ತನಗೆ ಚಿರಂಜೀವಿ, ಹಾಗೂ ಶಿವರಾಜ್ ಕುಮಾರ್ ಅವರನ್ನು ನೋಡಬೇಕೆಂಬ ಆಸೆಯೆಂದು ಹೇಳಿಕೊಂಡಿದ್ದಳು. ಆಸ್ಪತ್ರೆಯ ವೈದ್ಯರು ಈ ವಿಚಾರವನ್ನು ಚಿರಂಜೀವಿಯವರಿಗೆ ತಿಳಿಸಿದಾಗ, ನೇರವಾಗಿ ಚಿರಂಜೀವಿ ಬೆಂಗಳೂರಿಗೆ ಬಂದು ಆಸ್ಪತ್ರೆಗೆ ಭೇಟಿ ನೀಡಿ ರಾಧಾಳನ್ನು ಮಾತನಾಡಿಸಿದರು. ನಟ ಶಿವಣ್ಣ ಕೂಡಾ ಬಾಲಕಿಯ ಆಸೆ ಈಡೇರಿಸಲು ಇದೇ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದರು. ಕಣ್ಣು ಮರಳಿ ಪಡೆದ ಬಾಲಕಿಗೆ ತನ್ನ ಕಣ್ಣೆದುರೇ ಶಿವರಾಜ್ ಕುಮಾರ್, ಚಿರಂಜೀವಿ ಅವರನ್ನು ಜೊತೆಯಾಗಿ ನೋಡುವ ಅವಕಾಶ! ಯಾರಿಗುಂಟು ಯಾರಿಗಿಲ್ಲ ಹೇಳಿ..!
ಅಲ್ಲಿ ಮನದಾಳ ಬಿಚ್ಚಿಟ್ಟ ಚಿರಂಜೀವಿ ಅವಕಾಶ ಸಿಕ್ಕರೆ ಶಿವರಾಜ್ ಕುಮಾರ್ ಜತೆ ನಟಿಸುವ ಆಸೆ ಇದೆ ಎಂದರು. ಚಿರಂಜೀವಿ, ಶಿವಣ್ಣ ಆತ್ಮೀಯ ಗೆಳೆಯರು. ಇತ್ತೀಚೆಗಷ್ಟೇ ಈ ಗೆಳೆತನದ ಕಾರಣದಿಂದಾಗಿಯೇ ರಾಜಕೀಯದ ಅತಿಯಾದ ಒತ್ತಡವಿದ್ದರೂ, ಶಿವಣ್ಣ ಅವರ 100ನೇ ಚಿತ್ರ ಜೋಗಯ್ಯದ ಮುಹೂರ್ತಕ್ಕೆ ಬಂದಿದ್ದರು. ಹೀಗಿರುವಾಗ ಪರಸ್ಪರ ಸ್ನೇಹಕ್ಕೆ ಕಟ್ಟುಬಿದ್ದರೆ ಜೊತೆಯಾಗಿ ನಟಿಸೋದು ಕಷ್ಟದ ಕೆಲಸವೇನಲ್ಲ ಬಿಡಿ.