ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗೆ ಏನೂ ಬರವಿಲ್ಲ. ಇವುಗಳ ಪಟ್ಟಿಗೆ ಈಗ ಒಂಟಿ ಮನೆಯೂ ಸೇರಿಕೊಂಡಿದೆ. ಸದ್ದಿಲ್ಲದೇ ಕಳೆದ ವಾರ ತೆರೆಕಂಡಿರುವ ಈ ಚಿತ್ರಕ್ಕೆ ಒಂದು ವರ್ಗದ ಪ್ರೇಕ್ಷಕರ ಉತ್ತೇಜನ ಹಾಗೂ ಬೆಂಬಲವೂ ಲಭಿಸಿದೆ. ಚಿತ್ರ ತಕ್ಕ ಮಟ್ಟಿಗೆ ಓಡುತ್ತಿದೆ. ಹಾಗಾಗಿ, ನಷ್ಟವೇನು ಆಗದು ಎನ್ನುತ್ತಿದ್ದಾರೆ ಚಿತ್ರದ ನಿರ್ಮಾಪಕಿ ಬಿ.ಆರ್. ವಸಂತಕುಮಾರಿ.
ವೈ.ಎಸ್. ವಿಠ್ಠಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಾಥ್ ಸೇರಿದಂತೆ ಹಲವು ಗಣ್ಯ ನಟರು ಅಭಿನಯಿಸಿದ್ದಾರೆ. ಅತ್ಯಂತ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರ ಇದಾಗಿದೆ. ಚಿತ್ರಕ್ಕೆ ಯು ಪ್ರಮಾಣಪತ್ರ ಹೊಂದಿರುವ ಈ ಚಿತ್ರ ತ್ರಿಭುವನ್ ಚಿತ್ರ ಮಂದಿರದಲ್ಲಿ ತೆರೆ ಕಂಡು ಹೆಸರು ಮಾಡಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಚಿತ್ರಾಲಯದ ಪ್ರಥಮ ಕಾಣಿಕೆ ಇದಾಗಿದ್ದು, ಜನರಲ್ಲಿ ಸಾಕಷ್ಟು ಉತ್ಸಾಹ ಹಾಗೂ ಕುತೂಹಲ ಉಳಿಸಿಕೊಂಡು ಆರಂಭದಿಂದ ಕೊನೆಯವರೆಗೂ ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ ಎನ್ನುವುದು ಸುಳ್ಳಲ್ಲ.
ಒಂದು ಸಸ್ಪೆನ್ಸ್ ಚಿತ್ರವಾಗಿ ಇದು ಗೆದ್ದಿದೆ. ಹಣ ಗಳಿಸದಿದ್ದರೂ, ನೋಡುಗರಲ್ಲಿ ಕೊಟ್ಟ ದುಡ್ಡಿಗೆ ಮೋಸ ಮಾಡಿಲ್ಲ. ಈ ಮಾದರಿಯ ಚಿತ್ರ ಈಗ ಓಡುವುದಿಲ್ಲ ಎನ್ನುವ ನಂಬಿಕೆಯನ್ನು ಚಿತ್ರ ಹುಸಿ ಮಾಡಿದೆ ಎನ್ನುತ್ತಾರೆ ವಸಂತಕುಮಾರಿ.