ಸ್ವಾಮಿ ನಿತ್ಯಾನಂದರನ್ನು ತೆರೆಯ ಮೇಲೆ ಬೆತ್ತಲೆಗೊಳಿಸಲು ಮುಂದಾಗಿದ್ದ ರಮೇಶ್ ಅದೇಕೋ ಮನಸ್ಸು ಬದಲಿಸಿ ಇದೀಗ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸನ್ಯಾಸ ತ್ಯಜಿಸಿ ತಾರ್ಕಿಕ ಅರ್ಥ ಹುಡುಕುವ ಚಿತ್ರ ಮಾಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಹಾಸ್ಯ ಚಿತ್ರಗಳ ಸಾಲು ಸಾಲು ಅಭಿನಯದ ಜತೆಗೆ ಸೋಲನ್ನೂ ಅನುಭವಿಸಿರುವ ನಟ ರಮೇಶ್ ಈಗೊಂದು ಆತ್ಮಾವಲೋಕನಕ್ಕೆ ಮುಂದಾದಂತಿದೆ. ನಗಿಸಿದ್ದು ಸಾಕು ಅಂತನಿಸಿತೋ ಗೊತ್ತಿಲ್ಲ. ಅಥವಾ ನಗಿಸುವ ಸಾಕಷ್ಟು ಚಿತ್ರಗಳು ಇನ್ನೂ ನನ್ನ ಜೇಬಿನಲ್ಲಿವೆ ಎಂದನಿಸಿತೋ ಏನೋ, ಇದೀಗ ಕೊಂಚ ಭಿನ್ನ ಚಿತ್ರಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ರಂಗಪ್ಪ ಹೋಗ್ಬಿಟ್ನಾ, ಶಾಕ್ ಹಾಗೂ ಹ್ಯಾಪಿ ಹಸ್ಬೆಂಡ್ ಚಿತ್ರದಲ್ಲಿ ನಟಿಸುತ್ತಿರುವ ರಮೇಶ್ ಈ ಬಾರಿ ಹೆಸರಿಡದ ಚಿತ್ರವೊಂದಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ.
ಅಂದ ಹಾಗೆ, ಇದೇನು ಹೊಸ ಯತ್ನವಲ್ಲ. ಸ್ವಲ್ಪ ದಿನದ ಹಿಂದೆ 'ಸಮಾಗಮ' ಚಿತ್ರದ ನಿರ್ಮಾಪಕ ಅಂದಾನಿ ಗೌಡರ ಜೊತೆ ಸೇರಿ ಚಿತ್ರ ನಿರ್ಮಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದರ ನಡುವೆಯೇ ನಿತ್ಯಾನಂದನನ್ನೂ ಬಯಲಿಗೆಳೆಯಲು ಹೊರಟಿದ್ದರು. ಆದರೆ ಅದು ತಾಂತ್ರಿಕ ಕಾರಣದಿಂದ ಮುಂದೆ ಹೋಗಿತ್ತು. ಈಗ ತಮಿಳಿನ ಪುದು ಪುದು ಅರ್ಥಂಗಳ್ ಹೆಸರಿನ ಚಿತ್ರವನ್ನು ರಿಮೇಕ್ ಮಾಡಲು ಮುಂದಾಗಿದ್ದಾರೆ.
ಚಿತ್ರವನ್ನು ಗಜಾನನ ಆಚಾರ್ ನಿರ್ದೇಶಿಸುತ್ತಿದ್ದಾರೆ. ಕಿರಣ್ ಸಂಗೀತ ಹಾಗೂ ಆನಂದ್ ಅರಸ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಬಿಯಾಂಕಾ ದೇಸಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾದಕ ಚೆಲುವೆ ನಿಖಿತಾ ಈ ಚಿತ್ರದ ನಾಯಕಿಯಾಗುತ್ತಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂತಿಮ ಆಗಬೇಕಿದೆ ಅಷ್ಟೆ.