ಈ ವಾರ ತೆರೆ ಕಾಣುತ್ತೆ, ಮುಂದಿನ ವಾರ ತೆರೆ ಕಾಣುತ್ತೆ ಅಂತಲೇ ಕಾಗೆ ಹಾರಿಸುತ್ತಿರುವ ನಿರ್ಮಾಪಕರು ಕೊನೆಗೂ ಗುಬ್ಬಿ ಚಿತ್ರದ ಬಿಡುಗಡೆಗೆ ಮುಂದಾಗಿದ್ದಾರಂತೆ.
ಹಿಂದಿನ ತಿಂಗಳು ಅಪಾರ ಸುದ್ದಿಯಾಗಿದ್ದ ಚಿತ್ರದ ಬಿಡುಗಡೆ ಹೇಳ ಹೆಸರಿಲ್ಲದಂತೆ ಮರೆಯಾಗಿ, ಇದೀಗ ಮತ್ತೆ ಸುದ್ದಿಯಾಗಿದೆ. ಈ ಬಾರಿ ಪಕ್ಕಾ ಸುದ್ದಿ ಅನ್ನಲಾಗುತ್ತಿದ್ದು, ಮಾಸಾಂತ್ಯಕ್ಕೆ ಚಿತ್ರ ತೆರೆ ಕಂಡೇ ಕಾಣುತ್ತದೆ ಎನ್ನಲಾಗುತ್ತಿದೆ.
ಅಣಜಿ ನಾಗರಾಜ್ ನಿರ್ಮಿಸಿ ನಮನ ಫಿಲಂಸ್ ಅಡಿ ಎಂ. ರುದ್ರೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪಟ್ರೆ ಅಜಿತ್ ನಾಯಕರಾಗಿಯೂ, ರೀಮಾ ಎಂಬ ಸುಂದರಿ ನಾಯಕಿಯಗಿಯೂ ಅಭಿನಯಿಸುತ್ತಿದ್ದಾರೆ. ಇವರ ಪಾಲಿಗೆ ಇದು ನಿಜಕ್ಕೂ ಸತ್ವ ಪರೀಕ್ಷೆಯಾಗಿದ್ದು, ಚಿತ್ರದ ಬಿಡುಗಡೆ ವಿಳಂಬವಾಗಿ ಸೋತರೆ ತಮ್ಮ ಕರಿಯರ್ಗೆ ಅಲ್ಲಿಯೇ ಇತಿಶ್ರೀ ಬೀಳಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಆ ರೀತಿ ಆಗದು ಎಂದು ಭರವಸೆ ನೀಡಿರುವ ನಿರ್ಮಾಪಕರು ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಯುವಕರ ನಾಡಿ ಮಿಡಿತ ಅರಿತು ಅದಕ್ಕೆ ತಕ್ಕಂತೆ ಚಿತ್ರ ಸಿದ್ಧಪಡಿಸಿರುವ ಇವರು, ಈ ಚಿತ್ರದ ಮೂಲಕ ಯುವಕರಿಗೆ ಒಂದು ಸಂದೇಶ ಸಾರುತ್ತಿದ್ದೇನೆ ಎಂದಿದ್ದಾರೆ. ಯುವಕರನ್ನು ಮಾತ್ರವಲ್ಲ ಇದು ಎಲ್ಲಾ ವರ್ಗದ ಜನರನ್ನೂ ಮೆಚ್ಚಿಸಲಿದೆ ಎಂದು ಸಹ ಹೇಳುತ್ತಾರೆ.
ಆಕ್ಷನ್, ಲವ್, ಸೆಂಟಿಮೆಂಟ್ ಜತೆ ಏನೆಲ್ಲಾ ಅಂಶ ಬೇಕೋ ಅದನ್ನೆಲ್ಲಾ ನೀಡಿದ್ದೇನೆ. ಹಾಡುಗಳು ಸೂಪರ್ ಹಿಟ್ ಅಗಿದ್ದು, ಚಿತ್ರವೂ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.