'ಪ್ರೇಮ ಚಂದ್ರಮ ಕೈಗೆ ಸಿಗುವನೇ ಹೇಳೆ ತಂಗಾಳಿ...' ಈ ಹಾಡನ್ನು ಕೇಳಿ ಯಾರು ತಾನೆ ಪುಳಕಿತರಾಗಿಲ್ಲ. ಹೌದು ಈ ಹಾಡಿನ ಮೊದಲ ಶಬ್ಧ ಅಂದರೆ ಪ್ರೇಮ ಚಂದ್ರಮ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಜೇನುಕಲ್ಲು ಚಿತ್ರಾಲಯ ಹೊರ ತರುತ್ತಿರುವ ಈ ಚಿತ್ರ ಸದ್ಯ ವಿದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಯು.ಇ. ಗಣೇಶ್, ಜಿ. ಕುಮಾರ್, ಜಿ.ಎಸ್. ಜಗದೀಶ್ ಹಾಗೂ ಸುನಿಲ್ ಕುಮಾರ್ ಶಿಂಧೆ ಈ ಚಿತ್ರದ ನಿರ್ಮಪಕರಾಗಿದ್ದು, ಚಿತ್ರತಂಡದೊಂದಿಗೆ ಇವರೆಲ್ಲಾ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಇದೇ ತಿಂಗಳ 18 ರಿಂದ ಚಿತ್ರದ ನಾಲ್ಕು ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ.
ವಿಶೇಷ ಅಂದರೆ ಇಲ್ಲಿ ಚಿತ್ರೀಕರಣಗೊಳ್ಳುವ ನರ್ತನಕ್ಕೆ ಹಿಂಬದಿ ಇರುವ ಸಹ ನರ್ತಕಿಯರು ಇರಲ್ವಂತೆ. ಎಲ್ಲಾ ಫಾರಿನ್ ಮಯವಾಗಲಿದೆಯೆಂಬ ಸುದ್ದಿ ಕೇಳಿ ಬಂದಿದೆ. ವಿದೇಶಿ ಸಹ ನರ್ತಕಿಯರನ್ನು ನಾಯಕ ನಾಯಕಿಯ ಜೊತೆ ಕುಣಿಸುವ ಯೋಜನೆ ನಿರ್ದೇಶಕರದ್ದು.
ಇತ್ತೀಚೆಗೆ ಇದೊಂದು ಟ್ರೆಂಡ್ ಬೆಳೆಯುತ್ತಿದ್ದು, ಇಲ್ಲಿಂದ ದಂಡು ಕಟ್ಟಿಕೊಂಡು ಹೋಗಿ ಹಣ ವ್ಯಯ ಮಾಡುವ ಬದಲು ಅಲ್ಲಿನ ನರ್ತಕಿಯರಿಗೆ ಕೊಂಚ ಜಾಸ್ತಿ ಕೊಟ್ಟು ಡಾನ್ಸ್ ಮಾಡಿಸುವುದು. ಕೊಂಚ ಭಿನ್ನವಾಗಿಯೂ ಇರುತ್ತದೆ. ಜತೆಗೆ ಒಂದಿಷ್ಟು ಹಣವೂ ಉಳಿಯುತ್ತದೆ. ಅಷ್ಟೇ ಅಲ್ಲ, ಗ್ಲ್ಯಾಮರ್‌ಗಂತೂ ಕೊರತೆಯೇ ಇಲ್ಲ ಎಂಬುದು ನಗ್ನ ಸತ್ಯವೇ ಸರಿ!
ಬ್ಯಾಂಕಾಕಿನಲ್ಲಿ ನಡೆಯುವ ಹಾಡಿನ ಚಿತ್ರೀಕರಣದಲ್ಲಿ ಕಿರಣ್, ರಘು ಮುಖರ್ಜಿ, ರೇಖಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಚಿತ್ರವನ್ನು ಶಾಹೂರಾಜ್ ಶಿಂದೆ ನಿರ್ದೇಶಿಸಿದ್ದು, ಈಗಾಗಲೇ ಬೆಂಗಳೂರು ಸುತ್ತಮುತ್ತ, ಸಕಲೇಶಪುರ, ಕಾಗಿನೆಲೆ, ಮೈಸೂರು ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ. ಸಂಗೀತವನ್ನು ವಿ. ಹರಿಕೃಷ್ಣ ನೀಡಿದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ, ಶಿರಸಿಯ ಶಶಿಧರ್ ಭಟ್ ಸಂಭಾಷಣೆ ಹಾಗೂ ರವಿವರ್ಮ ಸಾಹಸ ಚಿತ್ರಕ್ಕಿದೆ.