ಶಿವರಾಜ್ ಕುಮಾರ್ ಅಭಿನಯದ 101ನೇ ಚಿತ್ರ ಶೀಘ್ರವೇ ಸೆಟ್ಟೇರಲಿದೆಯಂತೆ. ಈಗಾಗಲೇ ಸಾಕಷ್ಟು ಜನಪ್ರಿಯ ನಟರಾಗಿರುವ ಶಿವಣ್ಣ ಮಹಾ ಶಿವರಾತ್ರಿ ಎಂಬ ಧಾರ್ಮಿಕ ಪ್ರಧಾನ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ 101ನೇ ಚಿತ್ರವನ್ನು ಘೋಷಿಸಿಕೊಂಡಿದ್ದಾರೆ. ಸಾಕಷ್ಟು ಯುವ ನಟರ ಸವಾಲಿನ ನಡುವೆಯೂ ನಿರಂತರ ಜನಪ್ರಿಯತೆ ಕಾಪಾಡಿಕೊಂಡು, ದಿನದಿಂದ ದಿನಕ್ಕೆ ಸ್ಲಿಂ ಅಂಡ್ ಟ್ರಿಮ್ ಆಗುತ್ತಾ, ಯುವನಟರಿಗಿಂತ ತಾನೇನು ಕಮ್ಮಿ ಎನ್ನುವಂತೆ ನಟಿಸುತ್ತಿರುವ ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ಒಂದು ಭಿನ್ನ ಅಭಿನಯ ನೀಡಲು ಮುಂದಾಗಿದ್ದಾರೆ.
ಸದಾ ಹೊಸತನ ಹುಡುಕುವ ತುಡಿತದಲ್ಲಿರುವ ಇವರು ಈ ಹಿಂದೆ ಪೌರಾಣಿಕ ಚಿತ್ರವಾದ ಗಂಡುಗಲಿ ಕುಮಾರರಾಮ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿ ಖಡ್ಗ ಜಳಪಿಸಿದ್ದ ಇವರು ಜೋಗಿ ಚಿತ್ರದಲ್ಲಿ ನಟಿಸಿದಾಗ ಮಚ್ಚು ಹಿಡಿದ ರೌಡಿಯಾದರು. ಅಣ್ಣತಂಗಿಯಂತ ಸೆಂಟಿಮೆಂಟ್ ಚಿತ್ರದಲ್ಲೂ ನಟಿಸಿದರು. ತೀರಾ ಇತ್ತೀಚೆಗೆ ತಮಸ್ಸು ಚಿತ್ರದಲ್ಲಿ ವಿವಾದಕ್ಕೀಡಾಗುವಂಥ ಕಥಾ ಹಂದರವಿದ್ದರೂ ಮನೋಜ್ಞವಾಗಿ ನಟಿಸಿ ಕೋಮು ಸೌಹಾರ್ದತೆ ಸಾರಿ ಹೇಳಿದರು. ಒಟ್ಟಾರೆ ಪ್ರತಿ ಪಾತ್ರವನ್ನೂ ಅತ್ಯಂತ ಶ್ರದ್ದೆ ಹಾಗೂ ನಿಷ್ಠೆಯಿಂದ ಮಾಡುವ ಶಿವಣ್ಣ ಸೆಟ್‌ನಲ್ಲಿಯೂ ಎಲ್ಲರ ಅಚ್ಚು ಮೆಚ್ಚಿನ ವ್ಯಕ್ತಿ. ಎಲ್ಲರನ್ನೂ ಸಮಾನವಾಗಿ ಕಾಣುವ ಇವರು ಇದ್ದರೆ ಅಲ್ಲಿ ಜನ ಅತ್ಯಂತ ಆಸಕ್ತಿಯಿಂದ ಕೆಲಸ ಮಾಡುವಂತೆ ಮಾಡಿ ಬಿಡುತ್ತಾರೆ.
ಈಗಾಗಲೇ ಗಣೇಶ್ ಅವರ ಕೂಲ್ ಚಿತ್ರದಿಂದ ಆಚೆಗೆ ಬಂದಿರುವ ನಿರ್ದೇಶಕ ಮುಸ್ಸಂಜೆ ಮಹೇಶ್ ಈಗ ಶಿವಣ್ಣನ 101ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರೆ. ಶ್ರೀಧರ್ ಸಂಗೀತವಿದೆ. ಅಕ್ಟೋಬರ್ ಕೊನೆಗೆ ಶೂಟಿಂಗ್ ಶುರುವಾಗಲಿದೆಯಂತೆ. ನಾಯಕಿ ಹಾಗೂ ಉಳಿದ ತಂತ್ರಜ್ಞರ ಹುಡುಕಾಟ ನಡೆಯಲಿದೆಯಂತೆ. ಹೆಸರಿಗೆ ತಕ್ಕಂತೆ ಈ ಚಿತ್ರಕ್ಕಾಗಿ ಒಂದು ಹಳ್ಳಿ, ದೇವಸ್ಥಾನವನ್ನು ಹುಡುಕಲಾಗುತ್ತಿದೆಯಂತೆ. ಮೈಲಾರಿ, ಜೋಗಯ್ಯ ಜೊತೆ ಇದೀಗ ಮಹಾ ಶಿವರಾತ್ರಿಗೂ ಶಿವಣ್ಣ ಸಜ್ಜಾಗುತ್ತಿದ್ದಾರೆ.