ಯೋಗರಾಜ ಭಟ್ಟರ ಪ್ರತಿ ಚಿತ್ರವೂ ಒಬ್ಬರಲ್ಲ ಒಬ್ಬರಿಗೆ ಬ್ರೇಕ್ ಕೊಡುತ್ತದೆ. ಇದೀಗ ಪಂಚರಂಗಿಯಲ್ಲಿ ಅದು ನಿಧಿ ಸುಬ್ಬಯ್ಯ ಪಾಲಾಗಿದೆ. ಚಿತ್ರದ ನಾಯಕಿ ನಿಧಿ ಸುಬ್ಬಯ್ಯ ಅವರು ಈ ಚಿತ್ರದಲ್ಲಿ ನೀಡಿದ ಉತ್ತಮ ಅಭಿನಯದಿಂದ ಮಾರುಹೋದ ಅನೇಕ ನಿರ್ಮಾಪಕರು ಆಫರ್ ನೀಡುತ್ತಿದ್ದಾರಂತೆ. ಚಿತ್ರದ ಬಗ್ಗೆ ಅಭಿಮಾನದಿಂದ ಮಾತನಾಡುವ ನಿಧಿ ಇದು ನಿಜಕ್ಕೂ ಒಳ್ಳೆ ಸಿನಿಮಾ. ಮುಗಿಯುವುದೇ ಗೊತ್ತಾಗಲ್ಲ. ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅನ್ನಿಸುತ್ತದೆ. ಈ ಮಾದರಿಯ ಚಿತ್ರ ಮಾಡಿ ಅದರಲ್ಲಿ ನನಗೆ ಅಭಿನಯಿಸಲು ಅವಕಾಶ ನೀಡಿದ ಯೋಗರಾಜ ಭಟ್ಟರಿಗೆ ನಾನು ಚಿರಋಣಿ ಅನ್ನುತ್ತಿದ್ದಾರೆ.
ವಿಶೇಷ ಅಂದರೆ, ಚಿತ್ರದ ಅಭಿನಯವನ್ನು ಖುದ್ದು ಅನಂತನಾಗ್ ಹೊಗಳಿದ್ದು ಇವರಿಗೆ ಸಂತಸ ನೀಡಿದೆ. ಕನ್ನಡದ ಜನಪ್ರಿಯ ಹಾಗೂ ಹಿರಿಯ ನಟ ನನ್ನ ಪಾತ್ರ ನೋಡಿ ಸಂತಸ ಪಟ್ಟು ಅಭಿಮಾನದ ಮಾತುಗಳನ್ನು ಆಡಿ, ಮುಂದುವರಿ ಅಂತ ಹಾರೈಸಿದ್ದು ಇವರಿಗೆ ಅಚ್ಚಳಿಯದ ನೆನಪಾಗಿ ಉಳಿಯಲಿದೆಯಂತೆ. ತನ್ನೊಂದಿಗೆ 15 ನಿಮಿಷ ಅನಂತನಾಗ್ ಮಾತನಾಡಿದರು ಅಂತ ಅಭಿಮಾನದಿಂದ ಎಲ್ಲೆಡೆ ಹೇಳಿಕೊಳ್ಳುತ್ತಿದ್ದಾರೆ ನಿಧಿ.
ಅತ್ಯಂತ ಜನಪ್ರಿಯ ನಟಿಯಾಗಿ ಬೆಳೆಯುತ್ತಿರುವ ಇವರು ಕನ್ನಡಕ್ಕೆ ಸಿಕ್ಕ ಒಬ್ಬ ಉತ್ತಮ ನಟಿ. ಮೇಲಾಗಿ ಕೊಡಗಿನಲ್ಲೇ ಹುಟ್ಟಿ ಬೆಳೆದ ಕನ್ನಡತಿ. ಭವಿಷ್ಯದಲ್ಲಿ ಇವರಿಂದ ಸಾಕಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಲಾಗುತ್ತಿದೆ. ಇವರಿಗೆ ಹಿರಿಯ ನಟಿ ಜಯಂತಿ ಅಂದರೆ ಅತ್ಯಂತ ಪ್ರೀತಿಯಂತೆ. ಅವರ ಪಾತ್ರಗಳನ್ನು ಅತ್ಯಂತ ಅಭಿಮಾನದಿಂದ ನೋಡುತ್ತೇನೆ. ನಟಿಯಾದರೆ ಅವರ ಹಾಗೆ ಆಗಬೇಕೆಂಬ ಆಸೆ ಇದೆ ಎನ್ನುತ್ತಾರೆ ನಿಧಿ. ಪಂಚರಂಗಿಯಲ್ಲಿ ಮಾತಿಗಿಂತ ಹೆಚ್ಚಾಗಿ ಕಣ್ಣಲ್ಲಿ ಅಭಿನಯಿಸಿರುವ ಇವರು ಮುಂದಿನ ದಿನಗಳಲ್ಲಿ ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ. ಇವರ ಅಭಿನಯ ಕಲೆ ಹೀಗೆಯೇ ಮುಂದುವರಿಯಲಿ. ನಿಧಿಗೆ ಹೆಚ್ಚು ಹೆಚ್ಚು ಅವಕಾಶ ಸಿಗಲಿ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿಯೇ ಬಳಸಿಕೊಳ್ಳಲಿ ಎಂದು ಹಾರೈಸೋಣ.