ಜನಪ್ರಿಯಯ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಇಂದು ಶೂಟಿಂಗ್ ಸ್ಪಾಟ್ ಆಗಿ ಬಳಕೆ ಆಗುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಇದರಿಂದ ಈ ಭಾಗದ ಪ್ರಗತಿಯ ಜತೆಗೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇದೀಗ ವಿಜಯ್, ರಿಷಿಕಾ, ಶುಭಾ ಪೂಂಜಾ ಅಭಿನಯದ ಕಂಠೀರವ ಚಿತ್ರತಂಡವೀಗ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಮತ್ತಿತರೆಡೆ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿದೆ. ಒಂದು ಹಾಡಿನ ಶೂಟಿಂಗ್ ನಡೆಯುತ್ತಿದ್ದು, ನಟ ನಟಿಯರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ನಮ್ಮ ದೇಶದಲ್ಲಿ ಇಷ್ಟೊಂದು ಉತ್ತಮ ಧಾರ್ಮಿಕ ತಾಣಗಳು, ಪ್ರೇಕ್ಷಣೀಯ ಸ್ಥಳಗಳು ಇರುವಾಗ ಅದೇಕೆ ವಿದೇಶಕ್ಕೆ ತೆರಳಿ ಶೂಟಿಂಗ್ ಮಾಡುತ್ತಾರೆ ಅನ್ನುವುದು ನನಗೆ ತಿಳಿಯುತ್ತಿಲ್ಲ. ನಾನೂ ಸಾಕಷ್ಟು ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ದೇಶದಲ್ಲಿ ಅದರಲ್ಲೂ ನಮ್ಮ ರಾಜ್ಯದಲ್ಲಿರುವ ಇಂಥ ಪ್ರೇಕ್ಷಣೀಯ ಸ್ಥಳಗಳನ್ನು ಬಳಸಿಕೊಂಡರೆ ಇದಕ್ಕಿಂತ ಉತ್ತಮ ಕಾರ್ಯ ಬೇರೊಂದು ಇರುವುದಿಲ್ಲ ಎನ್ನುತ್ತಾರೆ ಚಿತ್ರೀಕರಣದಲ್ಲಿ ತೊಡಗಿರುವ ನಟ ದುನಿಯಾ ವಿಜಯ್.
ಚಿತ್ರದ ನಾಯಕ ಈ ರೀತಿ ಅಭಿಪ್ರಾಯ ಪಟ್ಟರೆ ನಾಯಕಿ ಶುಭಾ ಪೂಂಜಾ ಕೂಡಾ ಇದೇ ಮಾತನ್ನು ಒಪ್ಪುತ್ತಾರೆ. ಶೂಟಿಂಗ್ ಹೆಸರಿನಲ್ಲಿ ಇಲ್ಲಿಗೆ ಮೊದಲ ಬಾರಿ ಬಂದಿದ್ದೇನೆ. ನಿಜಕ್ಕೂ ತುಂಬಾ ಖುಶಿ ಕೊಟ್ಟಿರುವ ತಾಣ ಇದು. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ಇಂಥ ತಾಣದಲ್ಲಿ ಶೂಟಿಂಗಿನಲ್ಲಿ ಪಾಲ್ಗೊಂಡಿರುವುದೇ ನನ್ನ ಸುಕೃತ ಎಂದು ಅವರು ಹೇಳಿಕೊಂಡರು. ಚಿತ್ರವನ್ನು ತುಷಾರ್ ರಂಗನಾಥ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡಿನ ಶೂಟಿಂಗಿನಲ್ಲಿ ನಟಿ ರಿಷಿಕಾ ಸಹ ಪಾಲ್ಗೊಂಡದ್ದಾರೆ.