ಕಳೆದ ವಾರ ಬಹಳ ಸುದ್ದಿಯಾಗಿದ್ದ ಗೌಡ Vs ರೆಡ್ಡಿ ಚಿತ್ರ ಈ ವಾರವೂ ತನ್ನ ಸುದ್ದಿ ಪರ್ವವನ್ನು ಮುಂದುವರಿಸಿದೆ. ತೆರೆಗೆ ಬರುವ ಮುನ್ನವೇ ಸುದ್ದಿಯಾಗುತ್ತಿರುವ ಕನ್ನಡದ ಪ್ರಮುಖ ಚಿತ್ರಗಳ ಪಟ್ಟಿಯಲ್ಲಿ ಇದು ಅಗ್ರಮಾನ್ಯವಾಗಿ ನಿಂತಿದೆ. ಆದರೆ ಟೈಟಲ್ ಕೇಳಿದಾಕ್ಷಣ ಕುತೂಹಲ ಸೃಷ್ಟಿಸುವಂತಿದ್ದ ಈ ಸಿನಿಮಾಕ್ಕೀಗ ನೂರಾರು ವಿಘ್ನಗಳು ತಲೆದೋರಿವೆ. ಒಂದೆಡೆ ಈ ಟೈಟಲ್ ಕೊಡಲು ಚಲನಚಿತ್ರ ವಾಣಿಜ್ಯ ಮಂಡಳಿ ತಕರಾರು ತೆಗೆದಿದೆ. ಆದರೆ ಇನ್ನೊಂದೆಡೆ ನಮ್ಮ ಜನಪ್ರಿಯ ನಟ ಕನ್ನಡದ ಹಿರಿತಲೆ ಅನಂತನಾಗ್ ಮುನಿಸಿಕೊಂಡಿದ್ದಾರೆ. ಗೌಡ Vs ರೆಡ್ಡಿ ಚಿತ್ರದಿಂದ ಆಚೆ ಬಂದಿರುವ ಅನಂತನಾಗ್ ಇದಕ್ಕೆ ನೀಡಿರುವ ಕಾರಣ ತಮ್ಮನ್ನು ವಂಚಿಸಲು ಯತ್ನಿಸಲಾಗಿದೆ ಎನ್ನುವುದು.
ಹೌದು. ಚಿತ್ರದ ಟೈಟಲ್ ಕೇವಲ ಜನರ ಕುತೂಹಲ ಕೆಣಕಲು ಮಾಡಿದ ಚೀಪ್ ಗಿಮಿಕ್. ಚಿತ್ರದ ಕಥೆಯನ್ನು ತಾವು ಕೇಳಿದ್ದು, ಇದಕ್ಕೂ ಟೈಟಲ್‌ಗೂ ಸಂಬಂಧವಿಲ್ಲ. ಕೇವಲ ಇಂದಿನ ರಾಜಕೀಯದ ಜನಪ್ರಿಯ ಹೆಸರುಗಳನ್ನು ಇರಿಸಿಕೊಂಡು ಚಿತ್ರಮಂದಿರಕ್ಕೆ ಜನರನ್ನು ಕರೆಸುವ ಯತ್ನ ಮಾಡಲಾಗುತ್ತಿದೆ. ಇದು ನನಗೆ ಸರಿ ಬರುತ್ತಿಲ್ಲ. ಜನರನ್ನು ವಂಚಿಸಿ ಚಿತ್ರ ಮಂದಿರಕ್ಕೆ ತರುವ ಕಾರ್ಯ ಆಗಬಾರದು. ಆದ್ದರಿಂದ ಚಿತ್ರವನ್ನು ಒಲ್ಲೆ ಎಂದಿದ್ದೇನೆ ಎಂದು ತಿಳಿಸಿದ್ದಾರೆ.
ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿರುವುದು ಬೇಸರ ತಂದಿದೆ. ಅದಕ್ಕೆ ಹೊರ ಬೀಳುವ ನಿರ್ಧಾರ ಮಾಡಿದೆ. ಹೆಸರು ಬದಲಿಸಿದರೆ ಚಿತ್ರದಲ್ಲಿ ನಟಿಸಲು ಸಿದ್ಧ ಎಂದಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಹೋರಾಡುತ್ತೇನೆ. ಇದೇ ಹೆಸರು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ. ಹಾಗೇನಾದರೂ ಆದರೆ ಸುತಾರಾಂ ಒಪ್ಪುವುದಿಲ್ಲ ಎಂದು ಕಡ್ಡಿ ಮುರಿದಂತೆ ಅನಂತನಾಗ್ ಹೇಳಿದ್ದಾರೆ.
ಚಿತ್ರದಲ್ಲಿ ಗೌಡರ ಪಾತ್ರವನ್ನು ಅನಂತನಾಗ್ ನಿರ್ವಹಿಸಬೇಕಿತ್ತು. ಇದೇ ರೀತಿ ರೆಡ್ಡಿ ಪಾತ್ರಕ್ಕೆ ನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ನಾಯಕಿ ಹರಿಪ್ರಿಯಾ. ಇವರೊಂದಿಗೆ ರಂಗಾಯಣ ರಘು, ಸುಧಾ ಬೆಳವಾಡಿ, ರಮೇಶ್ ಪಂಡಿತ್ ಮತ್ತಿತರರು ಇದ್ದಾರೆ. ಕೃಷ್ಣವರ್ಧನ್ ಕುಲಕರ್ಣಿ ಸಂಗೀತ, ಗುರು ಪ್ರಶಾಂತ್ ರೈ ಛಾಯಾಗ್ರಹಣ ಚಿತ್ರಕ್ಕಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 27ರಿಂದ ಚಿತ್ರೀಕರಣವೂ ಆರಂಭವಾಗಲಿದೆಯಂತೆ.