ಪಂಚರಂಗಿ ಚಿತ್ರ ಹಿಟ್ ಆಗಿದೆ ಅಂತ ಯೋಗರಾಜ ಭಟ್ಟರು ಘೋಷಿಸಿದ್ದಾರೆ. ದಿನದಿಂದ ದಿನಕ್ಕೆ ಜನ ಚಿತ್ರಮಂದಿರಕ್ಕೆ ಬರುವ ಪ್ರಮಾಣ ಹೆಚ್ಚಾಗಿದೆ. ಚಿತ್ರದಿಂದ ದುಡ್ಡು ಕಾಸು ಚೆನ್ನಾಗಿ ಬರ್ತಿದೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಚಿತ್ರವನ್ನು ಮನರಂಜನೆಗಾಗಿ ನೋಡಬೇಕು. ನಿರ್ದೇಶಕನ ಹಿಂದಿನ ಚಿತ್ರದ ಯಶಸ್ಸನ್ನು ನಿರೀಕ್ಷೆಯಲ್ಲಿಟ್ಟು ಬರಬಾರದು. ಚಿತ್ರವನ್ನು ಚಿತ್ರವಾಗಿ ಆ ಸಂದರ್ಭಕ್ಕೆ ಸಂತಸ ಪಡುವ ರೀತಿ ವೀಕ್ಷಿಸಬೇಕು. ನನ್ನ ಚಿತ್ರಗಳು ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ. ಏನೋ ಸಂದೇಶ ನೀಡುವ ಕಾರಣಕ್ಕೆ ನಾನು ಚಿತ್ರ ಮಾಡಲ್ಲ. ಜನರಿಗೆ ಮನರಂಜಿಸುವುದು ಮಾತ್ರ ನನ್ನ ಉದ್ದೇಶ. ಅದನ್ನು ಈ ಚಿತ್ರದಲ್ಲೂ ಮಾಡಿದ್ದೇನೆ ಎನ್ನುತ್ತಾರೆ ಭಟ್ಟರು.
ಭಟ್ಟರ ಸಿನಿಮಾ ಗ್ಯಾಂಗ್‌ನ ಪರ್ಮನೆಂಟ್ ಸದಸ್ಯರಾಗಿರುವ ಅನಂತನಾಗ್ ಚಿತ್ರ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಚಿತ್ರ ನೋಡಿ ಮನೆಗೆ ಹೋಗಿ ಮಲಗಿದರೆ ಅವರಿಗೆ ನಿದ್ದೆಯೇ ಬರಲಿಲ್ಲವಂತೆ. ಅರೆ ಇದ್ಯಾಕಪ್ಪಾ ಅಂದುಕೊಂಡರೆ ಪಂಚರಂಗಿ ಪಾತ್ರಗಳೇ ಕಣ್ಣ ಮುಂದೆ ಬರುತ್ತಿದ್ದವಂತೆ. ಯಾವ ಚಿತ್ರವೂ ನನಗೆ ಇಷ್ಟೊಂದು ಕಾಡಿರಲಿಲ್ಲ. ಇದು ನಿಜಕ್ಕೂ ಉತ್ತಮ ಚಿತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಯಾವೊಬ್ಬ ನಿರ್ದೇಶಕನೂ ತನ್ನ ನಿರ್ಮಾಣದ ಚಿತ್ರದಲ್ಲಿ ಹೊಸ ಪ್ರಯೋಗ ಮಾಡುವುದಿಲ್ಲ. ಆದರೆ ಭಟ್ಟರು ಇಲ್ಲಿ ಅದನ್ನು ಮಾಡಿದ್ದಾರೆ. ಭಿನ್ನವಾಗಿ ಚಿತ್ರ ತೆಗೆದಿದ್ದಾರೆ. ಹೆಚ್ಚಿನ ಜನರನ್ನು ಇದು ಆಕರ್ಷಿಸಿದೆ.
ಭಟ್ಟರು ಮಾತಿಗಿಳಿದು, ಸಿಗ್ನಲ್‌ಗಳಲ್ಲಿ ಜನ ಈ ಚಿತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಕಾಲೇಜು ವರಾಂಡ, ಕಚೇರಿಗಳ ಕ್ಯಾಬಿನ್‌ಗಳಲ್ಲಿ ಚಿತ್ರದ ಚರ್ಚೆ ನಡೆಯುತ್ತಿದೆ. ಜನ ತಮಗೆ ಬೇಕಾದ ರೀತಿ ಶಬ್ಧ ಸೇರಿಸಿಕೊಂಡು ಲೈಫು ಇಷ್ಟೇನೆ ಎನ್ನುತ್ತಿದ್ದಾರೆ. 'ಗಳು'ಗಳನ್ನು ಸೇರಿಸಿ ಹಾಡುತ್ತಿದ್ದಾರೆ. ಇದು ನಿಜಕ್ಕೂ ಗೆಲುವಿನ ಲಕ್ಷಣ. ನನ್ನ ಉದ್ದೇಶ ಈಡೇರಿದೆ. ಚಿತ್ರ ಬಿಡುಗಡೆ ಆಗುವವರೆಗೆ ನಮ್ಮದು. ಆಮೇಲೆ ಅದು ಜನರದ್ದಾಗಬೇಕು. ಇಂದು ಅದನ್ನು ಜನ ಮಾಡಿದ್ದಾರೆ. ಹಾಡುಗಳನ್ನು ತಮ್ಮದಾಗಿಸಿಕೊಂಡು ಹಾಡುತ್ತಿದ್ದಾರೆ. ಇಷ್ಟೇ ನನಗೂ ಬೇಕಿತ್ತು, ಆಗಿದೆ ಎಂದು ಸಂತಸದಿಂದ ಹೇಳಿಕೊಳ್ಳುತ್ತಿದ್ದಾರೆ ಭಟ್ಟರು.