ಸಣ್ಣ ವಯಸ್ಸಿನಲ್ಲೇ ಜನಪ್ರಿಯತೆ ಪಡೆದುಕೊಂಡ ನಟಿ ಅಮೂಲ್ಯ ಇದೀಗ ಮನಸ್ಸಿನ ಬಗ್ಗೆ ಹೆಚ್ಚು ತಲೆಕೊಂಡಿಸಿದ್ದಾರೆ. ವಿವಾದಕ್ಕೆ ಸಿಲುಕಿ ಕಣ್ಣೀರು ಹಾಕಿದ್ದ ಈ ಮುದ್ದು ಮುಖದ ಬಾಲೆ ಇದೀಗ ಆ ಎಲ್ಲ ಬೇಸರಗಳಿಂದ ಹೊರ ಬಂದು ಮನಸ್ಸಿನ ಬಗ್ಗೆ ಮಾತನಾಡಲು ಹೊರಟಿದ್ದಾರೆ ಅಂದ ಮೇಲೆ ಖಂಡಿತವಾಗಿಯೂ ಅಭಿಮಾನಿಗಳಿಗೆ ನಿದ್ದೆ ಬರಲಿಕ್ಕಿಲ್ಲ.
ಹೌದು. ಅಮೂಲ್ಯ ಇದೀಗ 'ಮನಸಾಲಜಿ' ಮಾಡುತ್ತಿದ್ದಾರೆ. ಸೈಕಾಲಜಿ ಗೊತ್ತು, ಇದ್ಯಾವುದಪ್ಪ ಮನಸಾಲಜಿ ಅಂತ ತಲೆಕೆಡಿಸಬೇಡಿ. ಇದು ಅಮೂಲ್ಯರ ಹೊಸ ಸಿನಿಮಾ ಥಿಯರಿ. ಅರ್ಥಾತ್ ಅಮೂಲ್ಯ ಅಭಿನಯದ ಹೊಸ ಚಿತ್ರದ ಹೆಸರು.
ವಿಚಿತ್ರ ಹೆಸರಿನ ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದು ಅಮೂಲ್ಯ ಪಾಲಿಗೆ ಹೊಸತೇನಲ್ಲ. ಏಕೆಂದರೆ ಈ ಹಿಂದೆ ಪ್ರೇಮಿಸಂ ಎಂಬ ಹೆಸರಿನ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮನಸಾಲಜಿ ಕೈ ಹಿಡಿದಿದ್ದಾರೆ. ಒಟ್ಟಾರೆ ಸದಾ ಸುದ್ದಿಯಲ್ಲಿರುವ ನಟಿ ಇವರು ಅಂದರೆ ತಪ್ಪಾಗಲಾರದು. ಪಿಯುಸಿ ಓದುತ್ತಾ ಜೊತೆಗೆ ಸಿನಿಮಾ ದೋಣಿಯಲ್ಲೂ ಜೊತೆಜೊತೆಯಾಗಿ ಸಾಗುತ್ತಿರುವ ಅಮೂಲ್ಯಗೆ ನಾನು ನನ್ನ ಕನಸು ಚಿತ್ರ ಉತ್ತಮ ಹೆಸರನ್ನು ತಂದುಕೊಟ್ಟಿದೆ.
ಹಾಂ, ಅಂದಹಾಗೆ ವಿಶೇಷವೆಂದರೆ, ಮನಸಾಲಜಿಯನ್ನು ಅಮೂಲ್ಯ ಅವರ ಅಣ್ಣ ದೀಪಕ್ ಅವರೇ ನಿರ್ದೇಶಿಸುತ್ತಿದ್ದಾರಂತೆ. ಈಗಾಗಲೇ ಚಿತ್ರವೊಂದಕ್ಕೆ ಸಂಭಾಷಣೆ ಬರೆದು ಅನುಭವವಿರುವ ದೀಪಕ್ ಉತ್ತಮ ಗ್ರಾಫಿಕ್ಸ್ ವಿನ್ಯಾಸಗಾರರೂ ಹೌದು. ಇದೀಗ ನಿರ್ದೇಶಕನಾಗಲೂ ಪ್ರಯತ್ನ ಮಾಡುತ್ತಿದ್ದಾರೆ. ನಾಯಕರಾಗಿ ಜೋಶ್ ಚಿತ್ರದ ಖ್ಯಾತಿಯ ನಾಯಕ ರಾಕೇಶ್ ಆಯ್ಕೆಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅತಿ ಶೀಘ್ರವೇ ತೆರೆಗೆ ಬರುತ್ತದೆ ಎನ್ನಲಾಗುತ್ತಿದೆ. ವಿವಾದದಿಂದ ಸಾಕಷ್ಟು ಜರ್ಝರಿತರಾಗಿರುವ ಅಮೂಲ್ಯಗೆ ಈ ಮನಸಾಲಜಿ ಚಿತ್ರ ಒಂದು ಬದಲಾವಣೆ ನೀಡಲಿ. ಸೆ.14ರ ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡ ಅಮೂಲ್ಯಗೆ ಈ ಹುಟ್ಟುಹಬ್ಬ ಉತ್ತಮ ಚಿತ್ರಗಳನ್ನು, ಹೆಸರನ್ನೂ ನೀಡಲಿ ಎಂದೇ ಹಾರೈಸೋಣ.