ಆ ದಿನಗಳು ಖ್ಯಾತಿಯ ಸುರಸುಂದರಾಂಗ ನಟ ಚೇತನ್ಗೆ ಅದ್ಯಾಕೋ ಅದೃಷ್ಟ ಮತ್ತೆ ಕೈಕೊಟ್ಟಿದೆ. ಸಾಕಷ್ಟು ಉತ್ತಮ ಅಭಿನಯ, ಫೈಟ್ ಹಾಗೂ ಡಾನ್ಸ್ ಮಾಡುವ ಸಾಮರ್ಥ್ಯವಿದ್ದೂ ಅದೃಷ್ಟ ಇಲ್ಲವಾಗಿದೆ.
ಹೌದು. ಇದು ಇತ್ತೀಚೆಗೆ ಅವರು 'ಮರೆಯಲಾರೆ' ಚಿತ್ರ ತಂಡದಿಂದ ಹೊರ ಬಿದ್ದದ್ದೇ ಹೀಗೆ ಅನ್ನಿಸಲು ಕಾರಣ. ಒಂದಿಷ್ಟು ವಿರಾಮದ ನಂತರ ಅವರು ಈ ಚಿತ್ರ ಒಪ್ಪಿಕೊಂಡಿದ್ದರು. ಜೊತೆಗೆ ತಾವೇ ಈ ಚಿತ್ರಕ್ಕೆ ಸಂಭಾಷಣೆ ಬರೆಯುವುದಾಗಿಯೂ ತಿಳಿಸಿದ್ದರು. ಇವರ ಬಿರುಗಾಳಿ ಹಾಗೂ ಸೂರ್ಯಕಾಂತಿ ಎರಡೂ ಚಿತ್ರಗಳು ತೋಪೆದ್ದ ಪರಿಣಾಮ ಚಿತ್ರ ಬದುಕಿನಲ್ಲಿ ಇವರು ಒಂದಿಷ್ಟು ಹಿನ್ನಡೆ ಅನುಭವಿಸಿದ ನಂತರ ಪತ್ತೆಯೇ ಇಲ್ಲದಂತಾಗಿ ಹೋಗಿದ್ದ ಸಂದರ್ಭ ಮರೆಯಲಾರೆ ಚಿತ್ರ ಒಪ್ಪಿದ್ದರು. ಇದೀಗ ಅವರ ಈ ಚಿತ್ರದ ಕನಸಿಗೂ ಪೆಟ್ಟು ಬಿದ್ದಿದೆ.
ಆದರೆ ಇತ್ತೀಚೆಗೆ ಅವರು ಒಪ್ಪಿ ಅಭಿನಯಿಸಲು ಮುಂದಾಗಿದ್ದ ಮರೆಯಲಾರೆ ಚಿತ್ರ ತಂಡ ಇದೀಗ ಅವರನ್ನು ಒಲ್ಲೆ ಎಂದು ಬಿಟ್ಟಿದೆ. ಒಟ್ಟಾರೆ ಚಿತ್ರ ಆರಂಭಕ್ಕೆ ಮುನ್ನವೇ ನಾಯಕನ ನಿರ್ಗಮನ ಆಗಿರುವುದು ಯಾವ ಕಾರಣಕ್ಕೋ ಗೊತ್ತಿಲ್ಲ.
ಖಾದ್ರಿ ಶಾಮಣ್ಣ ಅವರ ಸಹೋದರನ ಪುತ್ರ ಶರತ್ ಖಾದ್ರಿ ನಿರ್ಮಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಿಂದ ಚೇತನ್ ಹೊರ ಬರಲು ಕಾರಣ ಏನು ಎನ್ನುವುದು ಇದುವರೆಗೂ ತಿಳಿದಿಲ್ಲ. ಚಿತ್ರವನ್ನು ಜುಲೈ ತಿಂಗಳಲ್ಲಿ ಆರಂಭಿಸಲಾಗಿತ್ತು. ರಾಜ್ಯದ ನಾನಾ ಭಾಗದಲ್ಲಿ ಶೂಟಿಂಗ್ ನಡೆಸುವ ಇರಾದೆಯನ್ನೂ ಹೊಂದಲಾಗಿತ್ತು. ಆದರೆ ಆರಂಭಕ್ಕೆ ಮುನ್ನವೇ ವಿಘ್ನ ಎದುರಾಗಿದೆ. ಚೇತನ್ ಮುಂದಿನ ನಡೆ ಏನೆಂದು ಕಾದು ನೋಡಬೇಕು.