ಮೊದಲ ಚಿತ್ರಕ್ಕೇ ಸ್ವರ್ಣಕಮಲ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಅಭಯಸಿಂಹರ ಮಹತ್ವಾಕಾಂಕ್ಷೆಯ ಚಿತ್ರ ಶಿಕಾರಿ. ಇದರಲ್ಲಿ ಮಲಯಾಳಂನ ಜನಪ್ರಿಯ ನಟ ಮಮ್ಮುಟ್ಟಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರಿಗೆ ನಾಯಕಿಯಾಗಿ ಕೊನೆಗೂ ಪೂನಂ ಬಾಜ್ವ ಆಯ್ಕೆಯಾಗಿದ್ದಾರೆ.
ತಂಗಿಗಾಗಿ ಚಿತ್ರದಲ್ಲಿ ದರ್ಶನ್ ಜತೆ ನಟಿಸಿದ್ದ ಇದೇ ಬಟ್ಟಲು ಕಣ್ಣಿನ ಸುಂದರಿ ಈಗ ಮಮ್ಮುಟ್ಟಿ ಅವರ ಜತೆ ಹೆಜ್ಜೆ ಹಾಕುವ ಅವಕಾಶ ಪಡೆದುಕೊಂಡಿದ್ದಾರೆ. ಇದುವರೆಗೂ ಚಿತ್ರದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ಶ್ರದ್ದಾ ಆರ್ಯ ಆಯ್ಕೆಯಾಗುತ್ತಾರೆ ಎಂಬ ಗುಲ್ಲಿತ್ತು. ಇದೀಗ ಆ ಗಾಸಿಪ್ಗೆ ವಿರಾಮ ಬಿದ್ದಿದ್ದು, ಕೊನೆಗೂ ಪೂನಂ ಭಾಜ್ವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಚಿತ್ರದಲ್ಲಿ ಮಮ್ಮುಟ್ಟಿ ಅವರು ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕರಣವೂ ಆಗಲೇ ಮುಗಿದು ಹೋಗಿದೆ. ಇನ್ನೇನಿದ್ದರೂ ಎರಡನೇ ಹಂತ ತೀರ್ಥಹಳ್ಳಿ ಹಾಗೂ ಆಗುಂಬೆಯಲ್ಲಿ ನೆರವೇರಲಿದೆಯಂತೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಇದು ಕನ್ನಡದ ಜತೆ ಮಲಯಾಳಂನಲ್ಲೂ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಮಮ್ಮುಟ್ಟಿ ಜತೆ ಆದಿತ್ಯ ಅಭಿನಯಿಸಿ ಕನ್ನಡದ ಭಾಗದ ಚಿತ್ರೀಕರಣ ಪೂರೈಸಿದ್ದಾರೆ. ಇದೀಗ ಎರಡನೇ ಹಂತದಲ್ಲಿ ಮಲಯಾಳಂ ನಟರು ಭಾಗವಹಿಸಲಿದ್ದಾರೆ.