ನೆನಪಿರಲಿ, ಜೊತೆಜೊತೆಯಲಿ ಚಿತ್ರಗಳ ನಂತರ ಇದೀಗ ಲವ್ಲೀ ಸ್ಟಾರ್ ಪ್ರೇಮ್‌ಗೆ ಅದೃಷ್ಟ ಒಲಿದಿದೆ. ಬಿಡುಗಡೆಗೂ ಮೊದಲೇ ಸೋಲುವ ಭೀತಿಯಲ್ಲೇ ಇದ್ದ ಜೊತೆಗಾರ ಕೊನೆಗೂ ಗೆದ್ದಿದೆ. ಚಿತ್ರ ವಿಳಂಬವಾಗಿ ತೆರೆಕಂಡು ಸೋಲುವ ಭೀತಿ ಎದುರಿಸಿತ್ತು. ಆದರೆ ಎಲ್ಲವನ್ನೂ ಮೀರಿ ಚಿತ್ರ ಗೆದ್ದಿದೆ.
ಎರಡು ವರ್ಷದ ನಂತರ ನಿರ್ದೇಶಕ ಸಿಗಮಣಿ ಒಂದು ಉತ್ತಮ ಚಿತ್ರ ನೀಡಿ ಗೆದ್ದಿದ್ದಾರೆ. ಪ್ರೇಮ್ ಪಾಲಿಗೆ ಈ ಚಿತ್ರ ಅದೃಷ್ಟ ತಂದುಕೊಟ್ಟಿದ್ದು, ಬಹು ದಿನದ ನಂತರ ಅವರ ಮುಖದಲ್ಲೀಗ ಮಂದಹಾಸ ಮೂಡಿದೆ. ಇತ್ತೀಚೆಗೆ ಇವರ ಅಭಿನಯದ ಎರಡನೇ ಮದುವೆ ಹಿಟ್ ಆಗಿತ್ತಾದರೂ, ಇದರಲ್ಲಿ ಅವರ ಪಾತ್ರಕ್ಕೆ ಅಷ್ಟು ಮನ್ನಣೆ ಸಿಕ್ಕಿಲ್ಲ.
ಜೊತೆಜೊತೆಯಲಿ ಚಿತ್ರದ ನಂತರ ರಮ್ಯಾ- ಪ್ರೇಮ್ ಒಟ್ಟಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದು ಚಿತ್ರದಲ್ಲಿ ರಮ್ಯಾ ಜತೆ ನಟಿಸಲು ಪ್ರೇಮ್‌ಗೆ ಅಂಜಿಕೆ ಎದುರಾಗಿತ್ತಂತೆ. ಅಷ್ಟು ದೊಡ್ಡ ನಟಿ ಜತೆ ಹೇಗೆ ಹೀರೋ ಆಗಿ ಮೆರೆಯುವುದು ಎನ್ನುವ ಅಳುಕು ಇತ್ತಂತೆ. ಆದರೆ, ಅದು ಈ ಚಿತ್ರದಲ್ಲಿ ಕಾಣಲಿಲ್ಲ. ಹೆದರಿಕೆ ಅನ್ನಿಸಲೇ ಇಲ್ಲ. ಸಹಜವಾಗಿ ನಟಿಸಿದೆ ಎನ್ನುತ್ತಾರೆ.
ಚಿತ್ರದ ಯಶಸ್ಸಿಗೆ ಹಾಡುಗಳೇ ಪ್ಲಸ್ ಪಾಯಿಂಟ್ ಅಂತೆ. ಮಧುರ ಹಾಡುಗಳು ಚಿತ್ರವನ್ನು ಗೆಲ್ಲಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿವೆ. ಒಟ್ಟಾರೆ ಎಲ್ಲರ ಸಾಂಘಿಕ ಪ್ರಯತ್ನದಿಂದ ಚಿತ್ರ ಗೆದ್ದಿದೆ.