ಮನಸಾರೆಗೆ 4 ಪ್ರಶಸ್ತಿ! ಐಂದ್ರಿತಾ- ಪುನೀತ್ ಶ್ರೇಷ್ಠ ನಟ ನಟಿ
PR
ನಮ್ಮ ಯೋಗರಾಜ ಭಟ್ಟರೆಂದರೆ ಸುಮ್ನೇನಾ..? ಹೌದು. ಸಾಲು ಸಾಲು ಉತ್ತಮ ಚಿತ್ರಗಳನ್ನೇ ನೀಡಿದ ಭಟ್ಟರ ಕಿರೀಟಕ್ಕೆ ಈಗ ಮತ್ತಷ್ಟು ಗರಿಗಳು ಸೇರಿಕೊಂಡಿವೆ. ಕಳೆದ ವರ್ಷ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದ್ದ ಮನಸಾರೆ ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಮತ್ತೆ ಮಿಂಚಿದೆ. ಭಟ್ಟರನ್ನೂ ಮಿಂಚುವಂತೆ ಮಾಡಿದೆ.
ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ನಡೆದ 'ಸೌತ್ ಸ್ಕೌಪ್ ಸಿನಿ ಪ್ರಶಸ್ತಿ- 2010'ನಲ್ಲಿ ಚಿತ್ರ ಒಟ್ಟು ನಾಲ್ಕು ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಯೋಗರಾಜ ಭಟ್ಟರ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಮಗದಷ್ಟು ಗರಿಗಳನ್ನು ಸೇರಿಸಿದೆ. ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ ಮನಸಾರೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ, ಹಾಗೂ ಅತ್ಯುತ್ತಮ ಗೀತ ಸಾಹಿತ್ಯದ ವಿಭಾಗಗಳಲ್ಲೂ ಪ್ರಶಸ್ತಿ ಗೆದ್ದುಕೊಂಡಿತು.
ಅತ್ಯುತ್ತಮ ನಟಿಯಾಗಿ ಮನಸಾರೆ ಚಿತ್ರದ ಅಭಿನಯಕ್ಕಾಗಿ ಐಂದ್ರಿತಾ ರೇ ಪ್ರಶಸ್ತಿ ಬಾಚಿಕೊಂಡರೆ, ರಾಜ್ ಚಿತ್ರದ ಅಭಿನಯಕ್ಕಾಗಿ ಪುನೀತ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದು ವಿಶೇಷ.
ಇನ್ನು 'ಎಲ್ಲೋ ಮಳೆಯಾಗಿದೆ ಇಂದು...' ಎಂಬ ಮನಸಾರೆ ಚಿತ್ರದ ಮಧುರ ಗೀತೆಗೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯಕ್ಕೆ ಸಲ್ಲಬೇಕಾದ ಗೌರವವೂ ಸಂದಿತು. ಪಂಚರಂಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಭಟ್ಟರಿಗೆ ಈ ನಾಲ್ಕು ಪ್ರಶಸ್ತಿಗಳ ಗುಚ್ಛ ಮತ್ತೊಂದು ಸಂತೋಷ ನೀಡಿರುವುದು ವಿಶೇಷ.
ಪ್ರಶಸ್ತಿ ಪಟ್ಟಿ ಹೀಗಿದೆ... ಅತ್ಯುತ್ತಮ ಚಿತ್ರ- ಮನಸಾರೆ ಅತ್ಯುತ್ತಮ ನಿರ್ದೇಶಕ- ಯೋಗರಾಜ್ ಭಟ್ (ಚಿತ್ರ- ಮನಸಾರೆ) ಅತ್ಯುತ್ತಮ ನಟ- ಪುನೀತ್ ರಾಜ್ ಕುಮಾರ್ (ಚಿತ್ರ- ರಾಜ್ ದಿ ಶೋ ಮ್ಯಾನ್) ಅತ್ಯುತ್ತಮ ನಟಿ- ಐಂದ್ರಿತಾ ರೇ (ಚಿತ್ರ- ಮನಸಾರೆ) ಅತ್ಯುತ್ತಮ ಪೋಷಕ ನಟ- ದಿಲೀಪ್ ರಾಜ್ (ಚಿತ್ರ- ಲವ್ ಗುರು) ಅತ್ಯುತ್ತಮ ಪೋಷಕ ನಟಿ- ಅಂಜನಾ ಸುಖಾನಿ (ಚಿತ್ರ- ಮಳೆಯಲಿ ಜೊತೆಯಲಿ) ಅತ್ಯುತ್ತಮ ಸಂಗೀತ ನಿರ್ದೇಶಕ- ಅರ್ಜುನ್ (ಚಿತ್ರ- ಬಿರುಗಾಳಿ) ಅತ್ಯುತ್ತಮ ಹಿನ್ನೆಲೆ ಗಾಯಕ- ಚೇತನ್ (ಹಾಡು- ಯಾರೆ ನೀ ದೇವತೆಯಾ..., ಚಿತ್ರ- ಅಂಬಾರಿ) ಅತ್ಯುತ್ತಮ ಹಿನ್ನೆಲೆ ಗಾಯಕಿ- ಶಮಿತಾ ಮಲ್ನಾಡ್ (ಹಾಡು- ಮಧುರ ಪಿಸು ಮಾತಿಗೆ.., ಚಿತ್ರ- ಬಿರುಗಾಳಿ) ತೀರ್ಪುಗಾರರ ವಿಶೇಷ ಪ್ರಶಸ್ತಿ- ಜಗ್ಗೇಶ್ (ಚಿತ್ರ- ಎದ್ದೇಳು ಮಂಜುನಾಥ) ಅತ್ಯುತ್ತಮ ಹಾಸ್ಯ ನಟ- ಸಾಧು ಕೋಕಿಲ (ಚಿತ್ರ- ರಾಮ್) ಅತ್ಯುತ್ತಮ ಸಿನಿ ಛಾಯಾಗ್ರಾಹಕ- ಕೃಷ್ಣ (ಚಿತ್ರ- ರಾಜ್ ದಿ ಶೋ ಮ್ಯಾನ್) ಅತ್ಯುತ್ತಮ ಗೀತ ಸಾಹಿತ್ಯ- ಜಯಂತ್ ಕಾಯ್ಕಿಣಿ (ಗೀತೆ- ಎಲ್ಲೋ ಮರೆಯಾಗಿದೆ..., ಚಿತ್ರ- ಮನಸಾರೆ)