ಯೋಗರಾಜ ಭಟ್ಟರ ಪಂಚರಂಗಿ ಒಂದೆಡೆ ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದ್ದರೆ, ಇನ್ನೊಂದೆ ಟೀಕಾಕಾರರಿಂದ ಟೀಕೆಯ ಸುರಿಮಳೆಯೇ ಸುರಿಯುತ್ತಿದೆ. ಪಂಚರಂಗಿಯಲ್ಲಿ ಭಟ್ಟರು ಕಥೆ ಹೇಳದೆ, ಕೇವಲ ಮಾತಿನಲ್ಲೇ ಚಿತ್ರ ಮುಗಿಸಿದ್ದಾರೆ. ಇದು ಚಿತ್ರರಸಿಕರಿಗೆ ಮಾಡಿದ ಮೋಸ ಎಂದು ಚಿತ್ರರಂಗದಲ್ಲೇ ಕೆಲವರು ದೂಷಿಸುತ್ತಿದ್ದರೆ, ಇನ್ನೊಂದೆಡೆ ಇನ್ನೂ ಕೆಲವರು, ಕಥೆಯೇ ಇಲ್ಲದೆ ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುವುದು ಚಿತ್ರದ ಪ್ಲಸ್ ಪಾಯಿಂಟ್. ಎಲ್ಲರಿಂದ ಇದು ಸಾಧ್ಯವಿಲ್ಲ ಎಂದು ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಒಟ್ಟಾರೆ ಭಟ್ಟರು ಸುದ್ದಿಯಲ್ಲಿದ್ದಾರೆ.
ಭಟ್ಟರು ಪಂಚರಂಗಿ ರಿಲೀಸ್ ಮಾಡುವ ಮೊದಲೇ ನಷ್ಟದಿಂದ ಪಾರಾಗಿದ್ದರು. ಕಾರಣ, ಟಿವಿ ಹಕ್ಕಿನಿಂದ ಚಿತ್ರದ ಬಹುತೇಕ ಹೂಡಿಕೆಯನ್ನು ಅವರು ಪಡೆದಿದ್ದರು. ಚಿತ್ರ ಬಿಡುಗಡೆಯ ನಂತರವೂ ಇದು ಅವರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಮೂಲಗಳ ಪ್ರಕಾರ, ಕೇವಲ ಎರಡು ವಾರಗಳಲ್ಲಿ ಪಂಚರಂಗಿಯ ಗಳಿಕೆ 3.57 ಕೋಟಿ ರೂಗಳವರೆಗೆ ಮುಟ್ಟಿದೆ!
ಪಂಚರಂಗಿ ಬಿಡುಗಡೆ ಕಂಡ ಮೊದಲ ವಾರದಲ್ಲೇ 1.58 ಕೋಟಿಯಷ್ಟು ಗಳಿಕೆ ಮಾಡಿದ್ದ ಪಂಚರಂಗಿ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಗಳಿಕೆಯ ಪ್ರಮಾಣ ಹೆಚ್ಚಿಸುತ್ತಲೇ ಸಾಗಿದೆ.
ಒಟ್ಟಿನಲ್ಲಿ ಸಣ್ಣ ಬಜೆಟ್ಟಿನ ಚಿತ್ರವಾದ ಪಂಚರಂಗಿಗೆ ಭಟ್ಟರ ಶ್ರಮ ಫಲಿಸಿದೆ. ನಿರೀಕ್ಷೆಗೂ ಮೀರಿ ಲಾಭವನ್ನು ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ರಿಮೇಕ್ ಹಕ್ಕಿಗಾಗಿ ತೆಲುಗು, ತಮಿಳು, ಹಿಂದಿಯಿಂದಲೂ ನಿರ್ಮಾಪಕರು ಮುಗಿಬಿದ್ದಿದ್ದಾರೆ ಎಂಬ ಅಂತೆ ಕಂತೆಗಳೂ ಇವೆ. ಒಟ್ಟಾರೆ ಭಟ್ಟರು ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ ಎಂಬುದೇ ಸಮಾಧಾನದ ಸಂಗತಿ.