ಅಪ್ಪು- ಪಪ್ಪು ಚಿತ್ರವನ್ನು ನೀವೆಲ್ಲಾ ನೋಡಿದ್ದೀರಿ. ಒರಂಗೊಟಾನ್ ಎಲ್ಲರನ್ನೂ ಮೆಚ್ಚಿಸಿದೆ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಮೆಚ್ಚುವ ರೀತಿ ವಿಶ್ವಾಸ ಗಳಿಸಿದೆ ಈ ಒರಂಗೊಟಾನ್.
ಚಿತ್ರದಲ್ಲಿ ಅತ್ಯಂತ ಸ್ನೇಹಜೀವಿ ಆಗಿರುವ ಈ ಪ್ರಾಣಿ ಅಸಲಿಯಾಗಿ ಅತ್ಯಂತ ಅಪಾಯಕಾರಿಯಂತೆ. ಭಾರತದಲ್ಲಿ ಇಂತ ಪ್ರಾಣಿಯನ್ನು ಚಿತ್ರಕ್ಕೆ ಬಳಸುವುದು ಸಾಧ್ಯವೇ ಇಲ್ಲ ಎನ್ನುವ ಕಾರಣಕ್ಕೆ ಈ ಚಿತ್ರವನ್ನು ಅದಿರುವ ಕಾಂಬೋಡಿಯಾದಲ್ಲೇ ಮಾಡಲಾಗಿದೆ. ಆದರೂ ಪ್ರಾಣಿದಯಾ ಸಂಘ ಹಾಗೂ ಸೆನ್ಸಾರ್ ಮಂಡಳಿಗೆ ಸಾಕಷ್ಟು ಕಾರಣ, ದಾಖಲೆ ನೀಡಿದ ನಂತರವೇ ಸೌಂದರ್ಯ ಜಗದೀಶ್ ತೆರೆ ಮೇಲೆ ಚಿತ್ರವನ್ನು ತಂದಿದ್ದಾರೆ. ಶೂಟಿಂಗ್ ಆದಿಯಾಗಿ, ಬಿಡುಗಡೆವರೆಗೆ ಒರಂಗೊಟಾನ್‌ನಿಂದ ಸಾಕಷ್ಟು ಸವಾಲುಗಳು ಚಿತ್ರ ತಂಡಕ್ಕೆ ಎದುರಾಗಿದೆ.
ಈ ಪ್ರಾಣಿಗೆ ಶೂಟಿಂಗ್ ಸಂದರ್ಭದಲ್ಲಿ ಡಾಕ್ಟರ್, ಶಿಕ್ಷಕಿ, ಗೈಡ್ ಸೇರಿದಂತೆ 25 ಮಂದಿ ಟ್ರೈನರ್‌ಗಳು ಇದ್ದರಂತೆ. ಒಟ್ಟಾರೆ ನಿರ್ಮಾಪಕರಿಗೆ ಚಿತ್ರಕ್ಕೆ ಎಷ್ಟು ವೆಚ್ಚ ತಗುಲಿದೆಯೋ ಗೊತ್ತಿಲ್ಲ. ಒರಂಗೊಟಾನ್ಗಾಗಿ 50 ಲಕ್ಷ ರೂ. ವ್ಯಯಿಸಿದ್ದಂತೂ ಸುಳ್ಳಲ್ಲ.
ಮೂರು ತಿಂಗಳು ಚಿತ್ರ ತಂಡದೊಂದಿಗೆ ಈ ಪ್ರಾಣಿ ಇತ್ತು. ಶೂಟಿಂಗ್‌ನಲ್ಲಿ ಪಾಲ್ಗೊಂಡಿತ್ತು. ಮೊದ ಮೊದಲು ತಂಡದೊಂದಿಗೆ ಸುತರಾಂ ಸಹಕರಿಸಲು ಒಪ್ಪದ ಇದು ನಂತರ ಸಹಕರಿಸಿತಂತೆ. ತೆರೆ ಮೇಲೆ ಪ್ರಾಣಿಯನ್ನು ನೋಡಲು ಜನ ಇಷ್ಟಪಡುತ್ತಾರೆ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಸಾಹಸ ಪಟ್ಟಿದ್ದಾಗಿ ನಿರ್ಮಾಪಕರು ಹೇಳಿಕೊಳ್ಳುತ್ತಾರೆ. ಅದೇ ರೀತಿ ನಿರ್ದೇಶಕ ಅನಂತ್ ರಾಜು ಮತ್ತೊಮ್ಮೆ ಈ ಚಿತ್ರದ ಮೂಲಕ ಪ್ರಶಂಸೆಯ ಮಹಾಪೂರವನ್ನೇ ಪಡೆದಿದ್ದಾರೆ.