ಕನ್ನಡ ಚಿತ್ರರಂಗದ ಹಳೆಯ ಚಿತ್ರಗಳ ಎಷ್ಟು ಸರಳ ಸುಮಧುರವಾಗಿದ್ದವೆಂದರೆ ಇಂದಿಗೂ ಹಳೆ ಹಾಡು ಕೇಳಿದಾಗ ಮನಸ್ಸು ಎಲ್ಲೋ ತೇಲಾಡಿದಂತೆ ಭಾಸವಾಗುತ್ತದೆ. ಈ ಹಾಡಿನ ಜನಪ್ರಿಯತೆಯನ್ನೇ ಆಧಾರವಾಗಿಟ್ಟುಕೊಂಡು ಮತ್ತೆ ಅವುಗಳನ್ನು ರಿಮಿಕ್ಸ್ ಹೆಸರಿನಲ್ಲಿ ಹೊಸ ತಾಳ, ಹಿಮ್ಮೇಳಗಳಿಗೆ ಒಗ್ಗಿಸಿ ಹೊಸ ಚಿತ್ರಗಳಲ್ಲಿ ಬಳಸುವುದನ್ನು ನೋಡಿದ್ದೇವೆ. ಈಗ ಹಾಗೆಯೇ ಮತ್ತೊಂದು ಚಿತ್ರ ಸುದ್ದಿ ಮಾಡಿದೆ. ಅದೇ ಗುಬ್ಬಿ.
ಈ ಹಿಂದೆಯೂ ಸಾಕಷ್ಟು ಹೊಸ ಚಿತ್ರಗಳು ಹಳೆಯ ಹಾಡನ್ನು ಬಳಸಿದ್ದವು. ಹಾಗೆ ಬಳಸಿದಾಗಲೆಲ್ಲ ಒಂದಲ್ಲ ಒಂದು ಟೀಕೆಗಳು ಆ ಹಾಡುಗಳ ಸುತ್ತ ಸುತ್ತಿದ್ದವು. ಉಪೇಂದ್ರ ತಮ್ಮ ಬುದ್ಧಿವಂತ ಚಿತ್ರದಲ್ಲಿ ರವಿವರ್ಮನ ಕುಂಚದ ಕಲೆ... ಎಂಬ ಹಾಡನ್ನು ರಿಮಿಕ್ಸ್‌ಗೊಳಿಸಿದ್ದು ಇದಕ್ಕೆ ತಾಜಾ ಉದಾಹರಣೆ. ಅದೇ ಹಾದಿಯಲ್ಲಿ ಇದೀಗ ಅದೇ ಹಾದಿಯಲ್ಲಿ ಗುಬ್ಬಿ ನಿಂತಿದೆ. ನೀರಿನಲ್ಲಿ ಅಲೆಯ ಉಂಗುರ ಎಂಬ ಮಧುರ ಹಾಡನ್ನು ರಿಮಿಕ್ಸ್ ಮಾಡುವ ಮೂಲಕ ಚಿತ್ರರಂಗದಲ್ಲಿ ಗದ್ದಲವೆಬ್ಬಿಸಿದೆ.
ಹೌದು, ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಗುಬ್ಬಿ ಚಿತ್ರದಲ್ಲಿ 'ನೀರಿನಲ್ಲಿ ಅಲೆಯ ಉಂಗುರ...' ಹಾಡನ್ನು ರಿಮೇಕ್ ಮಾಡಿ ಚಿತ್ರೀಕರಿಸಲಾಗಿದೆಯಂತೆ. ದಿವಂಗತ ಆರ್.ಎನ್. ಜಯಗೋಪಾಲ್ ರಚನೆಯ ಈ ಮಧುರ ಗೀತೆಗೆ ಮತ್ತೊಂದಿಷ್ಟು ಉಪ್ಪು, ಖಾರ, ಹುಳಿ ಸೇರಿಸಿ ಹೊಸ ರೂಪ ನೀಡಿ ಪ್ರೇಕ್ಷಕರ ಎದುರಿಗೆ ತರಲಾಗುತ್ತಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಇದರ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.
ಅಂದು ಪಿ.ಬಿ. ಶ್ರೀನಿವಾಸ್ ಹಾಗೂ ಪಿ. ಸುಶೀಲಾ ಈ ಹಾಡನ್ನು ಬೇಡಿ ಬಂದವಳು ಚಿತ್ರಕ್ಕಾಗಿ 1968ರಲ್ಲಿಯೇ ಹಾಡಿದ್ದರು. ಅದೊಂದು ಮಧುರ ಸಂಗೀತದ ಗೀತೆಗೆ ಉತ್ತಮ ಅಭಿನಯವೂ ಸಿಕ್ಕಿತ್ತು. ಆದರೆ ಗುಬ್ಬಿ ಚಿತ್ರದಲ್ಲಿ ಒಂದಿಷ್ಟು ಮಂದಿ ಪ್ರೇಮದ ಉನ್ಮಾದದಲ್ಲಿ ನರ್ತಿಸುವಂತೆ ಈ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಹಲವರು ದೂರಿದ್ದಾರೆ. ಆ ಮೂಲಕ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಚಿತ್ರದ ಬಿಡುಗಡೆ ನಂತರ ಇನ್ನೂ ಏನೇನು ಆಗುವುದೋ ಕಾದು ನೋಡಬೇಕಿದೆ.