ದಿನದಿಂದ ದಿನಕ್ಕೆ ಜೊತೆಗಾರ ಸ್ಟ್ರಾಂಗ್; ಭರ್ಜರಿ ಕಲೆಕ್ಷನ್
NRB
ರಮ್ಯಾ- ಪ್ರೇಮ್ ಜೋಡಿ ಎಂದಿನಂತೆ ಮತ್ತೆ ಪ್ರೇಕ್ಷಕರ ಮೇಲೆ ಮೋಡಿ ಮಾಡಿದೆ. ಸುದೀರ್ಘ ಸಮಯ ಡಬ್ಬದಲ್ಲಿ ಕೂತು ತಡವಾಗಿ ಬಿಡುಗಡೆ ಕಂಡರೂ ಜೊತೆಗಾರ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಬಿಡುಗಡೆ ಕಂಡ ಮೊದಲ ವಾರದಲ್ಲೇ 1.5 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಹಣ ಕೊಳ್ಳೆ ಹೊಡೆದಿದ್ದ ಜೋಗಿ ಹಾಗೂ ಭರ್ಜರಿಯಾಗಿ ಫ್ಲಾಪ್ ಆಗಿದ್ದ ಪ್ರೀತಿ ಏಕೆ ಭೂಮಿ ಮೇಲಿದೆ ಎಂಬ ಎರಡು ಚಿತ್ರಗಳನ್ನು ನಿರ್ಮಿಸಿದ್ದ ಅಶ್ವಿನಿ ಪ್ರೊಡಕ್ಷನ್ಸ್ ಜೊತೆಗಾರ ಚಿತ್ರವನ್ನು ನಿರ್ಮಿಸಿದೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಕಳೆದುಕೊಂಡಿದ್ದ ದುಡ್ಡನ್ನು ಈಗ ಮರಳಿ ಪಡೆಯುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ದಿನದಿಂದ ದಿನಕ್ಕೆ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಚಿತ್ರದ ಟಿವಿ ಹಕ್ಕು 81 ಲಕ್ಷ ರೂಪಾಯಿಗಳಿಗೆ ಬಹಳ ಹಿಂದೆಯೇ ಮಾರಾಟವಾಗಿತ್ತು ಎನ್ನುವ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್, ಆಡಿಯೋನಿಂದ ಅಂಥ ಹೇಳಿಕೊಳ್ಳುವ ದುಡ್ಡೇನೂ ಬಂದಿಲ್ಲ. ಆದರೆ, ಚಿತ್ರ ಚೆನ್ನಾಗಿ ಓಡುತ್ತಿರುವುದೇ ಖುಷಿಯ ವಿಚಾರ. ತಡವಾಗಿ ಬಿಡುಗಡೆಯಾದರೂ, ಸಾಕಷ್ಟು ಪ್ರಚಾರ ನೀಡಿದ ಮಾಧ್ಯಮ ಮಿತ್ರರಿಗೆ ನಾನು ಅದಕ್ಕಾಗಿ ಧನ್ಯವಾದ ಹೇಳುತ್ತೇನೆ ಎಂದರು.
ಪ್ರೇಮ್‌ಗಂತೂ ಈ ಜೊತೆಗಾರ ಹಿಟ್ ಆಗಿದ್ದರಿಂದ ನಿಜಕ್ಕೂ ಫುಲ್ ಖುಷ್ ಆಗಿದ್ದಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಬರೋಬ್ಬರಿ ಒಂದುವರೆ ವರ್ಷಗಳಿಂದ ಯಾವುದೇ ಹೇಳಿಕೊಳ್ಳುವಂಥ ಬಿಡುಗಡೆ ಕಾಣದೆ, ಅವಕಾಶವೂ ಇಲ್ಲದೆ ಸುತ್ತುತ್ತಿದ್ದ ಪ್ರೇಮ್‌ಗೆ ಈ ಚಿತ್ರದ ಮೂಲಕ ಮರುಜೀವ ಸಿಕ್ಕಿದೆ. ಹಾಗಾಗಿ ಅವರಿಗೆ ಅತೀವ ಸಂತೋಷವಾಗಿದ್ದು, ಅವರ ಮುಖದಲ್ಲೇ ವ್ಯಕ್ತವಾಗುತ್ತಿತ್ತು.
ಮಂಡ್ಯ, ಮೈಸೂರು ಪ್ರದೇಶದಲ್ಲೆಲ್ಲಾ ಈ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಮ್ ಅಲ್ಲಿಗೆ ಭೇಟಿ ನೀಡಿದಾಗ ಮುತ್ತಿಕೊಂಡ ಭಾರೀ ಜನಸ್ತೋಮದ ಗೌಜಿ ಗದ್ದಲದಲ್ಲಿ ಪ್ರೇಮ್ ಶರ್ಟು ಕೂಡಾ ಹರಿದು ಹೋಗಿದೆಯಂತೆ. ಆದರೂ ಪ್ರೇಮ್‌ಗೆ ಅದರಲ್ಲೂ ಸಂತೋಷ ಕಂಡಿದೆ. ಅಭಿಮಾನಿಗಳು ಪ್ರೇಮ್ ಅವರನ್ನು ಹೊತ್ತುಕೊಂಡು ಕುಣಿದಿದ್ದೇ ಅಲ್ಲದೆ, ಮೆರವಣಿಗೆ ಮಾಡಿದರು. ಗುಲ್ಬರ್ಗಾದಲ್ಲಿ ಪ್ರೇಮ್ ಅಭಿಮಾನಿಗಳು ಬೈಕ್ ರ‌್ಯಾಲಿ ಮಾಡಿದರು.
ಹಾಗೆ ನೋಡಿದರೆ, ಸ್ವತಃ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರಿಗೇ ಚಿತ್ರದ ಬಗ್ಗೆ ಕೊಂಚ ಭಯವಿತ್ತು. ತಡವಾಗಿ ಬಿಡುಗಡೆಯಾದ ಅಂಜಿಕೆಯೂ ಇನ್ನೊಂದೆಡೆ. ಹೀಗಾಗಿ ಅವರಿಗೂ ಚಿತ್ರದ ಗೆಲುವು ಆಶ್ಚರ್ಯ ಮೂಡಿಸಿದೆ. ಕೌಟುಂಬಿಕ ವರ್ಗದ ವೀಕ್ಷಕರನ್ನು ತನ್ನತ್ತ ಸೆಳೆದಿರುವ ಜೊತೆಗಾರ ತನ್ನ ಉತ್ತಮ ಸಭಾಷಣೆ, ನಿರೂಪಣೆ ಜೊತೆಗೆ ಮಧುರವಾದ ಸಂಗೀತದಿಂದ ಜನರನ್ನು ಮೋಡಿ ಮಾಡಿದೆ ಎಂದರೆ ತಪ್ಪಲ್ಲ.