'ಹೃದಯದಲಿ ಇದೇನಿದು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 1ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಹೊಸಬರೇ ಹೆಚ್ಚಾಗಿರುವ ಈ ಚಿತ್ರದ ಶೂಟಿಂಗ್ ಆರಂಭವಾದ ದಿನ ಮರೆತು ಹೋಗುವಷ್ಟು ಹಳೆಯದಾಗಿದೆ. ಬಹು ಸಮಯದಿಂದ ಚಿತ್ರದ ಬಗ್ಗೆ ನಿರೀಕ್ಷಿಸುತ್ತಲೇ ಇದ್ದ, ನಿಧಾನವಾಗಿ ಶೂಟಿಂಗ್ ಅಗುತ್ತಿದ್ದ ಈ ಚಿತ್ರ ಕೊನೆಗೂ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರಮಂದಿರವನ್ನೂ ಹುಡುಕಿಕೊಂಡಿರುವ ಚಿತ್ರತಂಡ ಅ.1ಕ್ಕೆ ಬಿಡುಗಡೆ ಮುಹೂರ್ತ ಫಿಕ್ಸ್ ಮಾಡಿದೆ.
ಖಾಸಗಿ ಟಿವಿ ಚಾನಲ್ ನಿರೂಪಕನಾಗಿರುವ ರಾಹುಲ್ ಈ ಚಿತ್ರದಲ್ಲಿ ನಾಯಕ. ನಾಯಕನೂ ಸೇರಿದಂತೆ ನಾಯಕಿಯರಾಗಿರುವ ಮೋನಿಕಾ, ರೂಪಾಲಿ ಸೇರಿದಂತೆ ಚಿತ್ರದಲ್ಲಿರುವವರೆಲ್ಲಾ ಹೊಸಬರು. ಹೊಸಬರೇ ಸೇರಿ ಸಿದ್ಧಗೊಂಡಿರುವ ಚಿತ್ರ ಇದಾಗಿದೆ. ನಿರ್ದೇಶಕ ಶಿವನ್ ಕೂಡ ಹೊಸಬರು. ಇವರು ಸಿಂಪಲ್ ಲವ್ ಸ್ಟೋರಿ ಹೆಣೆದಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತ ಕಥೆಯನ್ನು ಚಿತ್ರವಾಗಿಸಿ ಅಚ್ಚಕಟ್ಟಾಗಿ ಜನರಿಗೆ ನೀಡುವ ಹುಮ್ಮಸ್ಸು ಇವರದ್ದು.
ನಾಯಕಿ ರೂಪಾಲಿ ಮುಂಬೈ ಮೂಲದವರಾಗಿದ್ದು, ಇದು ಅವರ ಚೊಚ್ಚಲು ಚಿತ್ರ. ಚಿತ್ರದಲ್ಲಿ ಐಟಿ ಉದ್ಯೋಗಿಯಾಗಿ ಇವರು ನಟಿಸಿದ್ದಾರೆ. ರಾಹುಲ್ ಪಾಲಿಗೆ ಇದು ನಾಲ್ಕನೇ ಚಿತ್ರ. ಆಕ್ಟಿಂಗ್, ಡಾನ್ಸ್ ಎಲ್ಲಾ ಉತ್ತಮವಾಗಿ ಮಾಡಿ ಚಿತ್ರದ ಯಶಸ್ಸು ಕಾಣಲು ತುದಿಗಾಲಲ್ಲಿದ್ದೇನೆ ಎನ್ನುತ್ತಾರೆ.