ಹೌದು. ಅಂದು ರಾಜ್ ನಮ್ಮನ್ನಗಲಿದರು ಎನ್ನುವ ನೋವಿನ ಜತೆ ಕಣ್ಣನ್ನು ದಾನ ಮಾಡಿ ಹೋದರು ಅನ್ನುವ ಹೆಮ್ಮೆ ಅಭಿಮಾನಿಗಳದ್ದಾಯಿತು. ಇಂದು ಅವರು ಕನ್ನಡಿಗರಿಗಾಗಿ ಬಿಟ್ಟು ಹೋದ ಅಪಾರ ಆಸ್ತಿಯಲ್ಲಿ ಕಣ್ಣುಗಳ ಸಹ ಇವೆ. ಅವರ ಕಣ್ಣನ್ನು ಪಡೆದ ಇಬ್ಬರು ಬಾಳಲ್ಲಿ ಬೆಳಕು ಕಂಡಿದ್ದಾರೆ. ರಾಜ್ ಮಕ್ಕಳು ತಮ್ಮ ಮರಣಾ ನಂತರ ದೇಹವನ್ನು ದಾನ ಮಾಡುವುದಾಗಿ ಬರೆದುಕೊಟ್ಟಿದ್ದಾರೆ. ಇವೆಲ್ಲವುಗಳ ನಡುವೆ ಆಗಾಗ ರಾಜ್ ಕುಟುಂಬ ಹೀಗೆ ಹತ್ತು ಹಲವು ದಾನಗಳನ್ನು ಮಾಡುತ್ತಲೇ ಇರುತ್ತದೆ. ಆದರೆ ಈ ಬಾರಿ ವಿಶಿಷ್ಟವಾಗಿ ಗಮನ ಸೆಳೆದದ್ದು ರಾಜ್ ಕುಟುಂಬ ಮೆರೆದ ಮಾನವೀಯತೆ.
ರಾಜ್ ಕುಟುಂಬ ಹಲವರಿಗೆ ಮಾಡಿದ ಸಹಾಯ ಬೆಳಕಿಗೆ ಬರುವುದೇ ಇಲ್ಲ. ಈ ಬಾರಿ ಅದು ಬೆಳಕಿಗೆ ಬಂದಿದೆ. ತಮ್ಮ ಕಾರು ಚಾಲಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದುದನ್ನು ಕೇಳಿದ ರಾಜ್ ಕುಟುಂಬ ತಮ್ಮ ಚಾಲಕನ ಕಷ್ಟದಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಆತ ಮತ್ತೆ ಬದುಕಿ ಬರುವುದಕ್ಕೆ ನೆರವಾಗಿದ್ದಾರೆ.
ಡಾ. ರಾಜ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್‌ನ ಕಾರು ಚಾಲಕರಾಗಿದ್ದ ನಾಗೇಶ್ ಎಂಬುವರೇ ಇದೀಗ ಈ ಕುಟುಂಬದ ಕೃಪೆಯಿಂದ ಮರುಹುಟ್ಟು ಪಡೆದು ಬಂದಿದ್ದಾರೆ. ಐದಾರು ವರ್ಷದಿಂದ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಗೇಶ್‌ಗೆ ಕ್ಯಾನ್ಸರ್ ಮಾರಿ ತಗುಲಿತ್ತು. ಇದನ್ನು ತಿಳಿದ ಪಾರ್ವತಮ್ಮ ರಾಜ್ ಕುಮಾರ್ ಹಿಂದೆ ಮುಂದೆ ಯೋಚಿಸದೇ ಸಹಾಯ ಮಾಡಲು ಹೊರಟರು. ವಿಷಯ ತಿಳಿದ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸಹ ತಾಯಿಯ ಬೆಂಬಲಕ್ಕೆ ನಿಂತರು. ಒಟ್ಟು 3.5 ಲಕ್ಷ ರೂ. ಹಣ ನೀಡಿ ಚಿಕಿತ್ಸೆ ಕೊಡಿಸುವ ಮೂಲಕ ನಾಗೇಶ್ ಅವರನ್ನು ಬದುಕಿಸಿಸಲು ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಸೇವೆಗೂ ಬರುವಷ್ಟು ಸಜ್ಜುಗೊಳಿಸಿದ್ದಾರೆ. ರಾಜ್ ಕುಟುಂಬಕ್ಕೊಂದು ಹ್ಯಾಟ್ಸಾಫ್.