ಅಂದೊಮ್ಮೆ 'ಗುಣವಂತ'ನಾಗಿದ್ದ ಪ್ರೇಮ್ ಕೆಟ್ಟನಾಗಿದ್ದಾರೆ. ಅದ್ಯಾಕೋ ಗೊತ್ತಿಲ್ಲ. ಯಶಸ್ಸಿನ ಅಲೆಯಲ್ಲಿ ಬೀಗುತ್ತಿರುವ ಪ್ರೇಮ್ ಇದೊಂಥರಾ ಲವ್ ಸ್ಟೋರಿ ಅನ್ನುತ್ತಾ ಕೆಟ್ಟವನಾಗುತ್ತಿದ್ದಾರೆ.
ಅಯ್ಯೋ ಶಿವನೇ, ಒಂದಕ್ಕೊಂದು ಸಂಬಂಧ ಗೊತ್ತಾಗುತ್ತಿಲ್ಲ, ದಯವಿಟ್ಟು ಬಿಡಿಸಿ ಹೇಳ್ರೀ ಅನ್ನುತ್ತಿದ್ದೀರಾ? ಸರಿ ಬಿಡಿ. ತಲೆಕೆಡಿಸಿಕೊಳ್ಳುವ ವಿಚಾರವೇನೂ ಅಂಥಾದ್ದೇನಿಲ್ಲ. ವಿಷಯ ಸಿಂಪಲ್. ಜೊತೆಗಾರನ ಯಶಸ್ಸಿನ ಖುಷಿಯಲ್ಲಿರುವ ಪ್ರೇಮ್‌ಗೆ 'ಇದೊಂಥರಾ ಲವ್ ಸ್ಟೋರಿ' ಚಿತ್ರದಲ್ಲಿ ಅವಕಾಶ ಸಿಕ್ಕಿ ಇನ್ನಷ್ಟು ಖುಷಿ ಖುಷಿಯಾಗಿ ಓಡಾಡಿಕೊಂಡಿರೋದು ಗೊತ್ತೇ ಇದೆ. ಅಂಥ ಸಂದರ್ಭದಲ್ಲಿ ಪ್ರೇಮ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ. ಅದು 'ಕೆಟ್ಟವನು'.
ಶಿವಣ್ಣ ಅಭಿನಯದ ಚೆಲುವೆಯೇ ನಿನ್ನೆ ನೋಡಲು ಚಿತ್ರದಲ್ಲಿ ಪ್ರೇಮ್ ಒಂದು ಪಾತ್ರ ಮಾಡಿದ್ದರು. ಇದಕ್ಕೂ ಮೊದಲು ಹಿಟ್ ಆದ ಎರಡನೇ ಮದುವೆ ಚಿತ್ರದಲ್ಲೂ ಅವರು ಅಭಿನಯಿಸಿದರು. ಆದರೆ, ಇವೆರಡರಲ್ಲೂ ಏಅವರು ನಾಯಕ ನಟ ಆಗಿರಲಿಲ್ಲ. ಕಳೆದೊಂದು ವರ್ಷದಿಂದ ಅಂಥ ಹೇಳಿಕೊಳ್ಳುವ ಯಾವ ಅವಕಾಶವೂ ಇವರ ಪಾಲಿಗೆ ಸಿಗಲಿಲ್ಲ. ಸಿಕ್ಕ ಒಂದು ಚಿತ್ರ ಪ್ರೇಮ ಚಂದ್ರಮವೂ ಇತ್ತೀಚೆಗೆ ಕೈತಪ್ಪಿತ್ತು. ಹೀಗೆ ಹತಾಶೆಯಿಂದಿದ್ದ ಪ್ರೇಮ್ ಪಾಲಿಗೆ ಜೊತೆಗಾರನೂ ಅದೃಷ್ಟ ತಂದಿದ್ದಾನೆ. ಹೀಗಾಗಿ, ಪ್ರೇಮ ಚಂದ್ರಮ ಚಿತ್ರ ಕೈತಪ್ಪಿದರೂ ಇನ್ನೆರಡು ಚಿತ್ರಗಳ ಬಂಪರ್ ಹೊಡೆದಿದೆ. ಸದ್ಯ ಕೆಟ್ಟವನು ಹಾಗೂ ಇದೊಂಥರಾ ಲವ್ ಸ್ಟೋರಿ ಚಿತ್ರಗಳು ಪ್ರೇಮ್ ಕೈಯಲ್ಲಿವೆ. ಹೀಗಿರುವಾಗ ಖುಷಿ ಯಾರಿಗೆ ಆಗಲಿಕ್ಕಿಲ್ಲ ಹೇಳಿ! ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ಈ ಪಕ್ಕದ್ಮನೆ ಹುಡುಗನಂಥ ಸುಂದರಾಂಗನಿಗೆ ಹರಸಿ, ಹಾರೈಸಿ.