ಪ್ರಕಾಶ್ ರೈ ನಾನು ನನ್ನ ಕನಸನ್ನು ಮಾಡಿ ಕನ್ನಡಿಗರ ಮನ ಗೆದ್ದದ್ದು ಈಗಿನ್ನೂ ಹಸಿಯಾಗಿಯೇ ಇದೆ. ಇನ್ನೆರಡು ಚಿತ್ರಗಳನ್ನೂ ಅವರು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ನಡುವೆ ಅವರು ತಮ್ಮನ್ನೇ ಹೋಲುವ 'ತಮ್ಮ'ನೂ ಕೂಡಾ ಚಿತ್ರರಂಗಕ್ಕೆ ಬರುತ್ತಿದ್ದಾರೆ!
ಹೌದು, ಪ್ರಕಾಶ್ ರೈ ಸಹೋದರ ಪ್ರಸಾದ್ ರೈ ಚಿತ್ರವೊಂದರ ಮೂಲಕ ಚಿತ್ರ ಬದುಕಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ ಕನ್ನಡಕ್ಕಲ್ಲ. ತಮಿಳಿಗೆ!
ಪ್ರಕಾಶ್ ಹಾಗೂ ಪ್ರಸಾದ್ ಥೇಟ್ ಒಂದೇ ರೀತಿ ಇದ್ದಾರೆ. ಒಟ್ಟಿಗೆ ನಿಲ್ಲಿಸಿ ನೋಡಿದರೆ ಅಣ್ಣ ತಮ್ಮ ಅನ್ನುವ ಮುನ್ನ ಅವಳಿ ಜವಳಿ ಅನ್ನುವವರೇ ಹೆಚ್ಚಂತೆ. ಥೇಟ್ ಅಚ್ಚೊತ್ತಿದಂತೆ ಇವರಿಬ್ಬರೂ ಇದ್ದಾರೆ.
ಅದ್ಯಾವಾಗ ತಮಿಳು ಚಿತ್ರರಂಗಕ್ಕೆ ತೆರಳಿ ಖಳನಟನಾಗಿ ಪ್ರಕಾಶ್ ಜನಪ್ರಿಯರಾದರೋ ಅಣ್ಣನ ಜಾಡಲ್ಲೇ ತಮ್ಮನೂ ಹೊರಟಿದ್ದಾರೆ. ಚಿತ್ರದ ಹೆಸರು 'ಪಡೈ ಸೂಝಾ'. ಆದರೆ, ಅಣ್ಣನಂತೆ ನಾನು ಅಭಿನಯಿಸಲಿದ್ದೇನೆ ಎಂದು ಮಾತ್ರ ತಿಳಿಯಬೇಡಿ. ನನ್ನ ನಟನಾ ಶೈಲಿಯೇ ಭಿನ್ನವಾಗಿರಲಿದೆ. ಮುಂದೊಂದು ದಿನ ಕನ್ನಡಕ್ಕೂ ಬರುತ್ತೇನೆ. ಅಲ್ಲಿಯೂ ನನ್ನ ಛಾಪು ಮೂಡಿಸುತ್ತೇನೆ ಎಂದಿದ್ದಾರೆ.