ಶಿವರಾಜ್ ಕುಮಾರ್ ಅವರ 99ನೇ ಚಿತ್ರ ಮೈಲಾರಿ, 100ನೇ ಚಿತ್ರ ಜೋಗಯ್ಯ ನಂತರ ಈಗ 101 ನೇ ಚಿತ್ರವೂ ಸೆಟ್ಟೇರಲು ಸಜ್ಜಾಗಿದೆ. ಚಿತ್ರಕ್ಕೆ ಹೆಸರು ಇಟ್ಟಿಲ್ಲ. ತಾಂತ್ರಿಕ ವರ್ಗದ ಆಯ್ಕೆ, ನಾಯಕಿಯರ ಹುಡುಕಾಟ ಜೋರಾಗಿಯೇ ನಡೆದಿದೆ. ಆದರೆ ನಿರ್ದೇಶಕರ ಆಯ್ಕೆ ಈಗಾಗಲೇ ಮುಗಿದಿದ್ದು, ಶಿವಣ್ಣನ 'ಸತ್ಯ ಇನ್ ಲವ್' ಚಿತ್ರ ನಿರ್ದೇಶಿಸಿದ್ದ ರಾಘವ ಲೋಕಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರಂತೆ.
ಕೊನೆಗೂ ಇನ್ನೊಂದು ಶಿವಣ್ಣನ ಚಿತ್ರ ಮಾಡುವ ಅದೃಷ್ಟ ಲೋಕಿಗೆ ಒಲಿದು ಬಂದಿದೆ. ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಲೋಕಿ ಇದೀಗ ಗುಣಮುಖರಾಗಿ ಮರಳಿದ್ದಾರೆ. ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಕೆಲ ತಿಂಗಳು ವಿಶ್ರಾಂತಿಯಲ್ಲಿದ್ದರು. ಭರಣಿ ಮಿನರಲ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಚೊಚ್ಚಲ ಚಿತ್ರವನ್ನು ಅವರು ನಿರ್ದೇಶಿಸಿಸುತ್ತಿದ್ದಾರೆ.
ಚಿತ್ರದ ಅರ್ಧ ಭಾಗ ಬೆಂಗಳೂರಲ್ಲಿ ಚಿತ್ರೀಕರಣಗೊಳ್ಳಲಿದೆ. ಒಂದು ವಿಭಿನ್ನ ಚಿತ್ರ ಇದಾಗಿದ್ದು, ಇಂಥ ಚಿತ್ರಕ್ಕಾಗಿ ಪ್ರತಿಯೊಬ್ಬ ನಿರ್ದೇಶಕನೂ ಜೀವಮಾನವಿಡೀ ಬೇಕಾದರೂ ಕಾಯುತ್ತಾನೆ ಎನ್ನುವುದು ಲೋಕಿ ವಿವರ. ಚಿತ್ರದ ಅರ್ಧ ಭಾಗ ಬೆಂಗಳೂರಲ್ಲಿ ಆದರೆ, ಉಳಿದರ್ಧ ವಿದೇಶದಲ್ಲಿ ಶೂಟ್ ಆಗಲಿದೆಯಂತೆ.
ಅದೇನೇ ಇದ್ದರೂ ಈ ಚಿತ್ರದ ಶೂಟಿಂಗ್ ಶುರುವಾಗಲು ಶಿವಣ್ಣನ 100ನೇ ಚಿತ್ರ ಜೋಗಯ್ಯ ಶೂಟಿಂಗ್ ಮುಗಿಸಬೇಕೆಂತೆ. ಅದು ಮುಗಿದ ನಂತರವೇ ಇದರ ಚಿತ್ರೀಕರಣ ಆರಂಭವಾಗಲಿದೆ ಎಂದು ಲೋಕಿ ಹೇಳಿ ಬಿಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ ಚಿತ್ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಸಾಹಸ ಪ್ರಧಾನ ದೃಶ್ಯ ಹಾಗೂ ಹಾಡಿಗೆ ಇದು ಕೇಂದ್ರೀಕೃತವಾಗಲಿದೆ ಎನ್ನಲಾಗುತ್ತಿದೆ.