ಪವರ್ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬಹುಶಃ ಎಲ್ಲಾ ನಿರೀಕ್ಷೆಯಂತೆ ಆದರೆ ಅಕ್ಟೋಬರ್ ಎರಡನೇ ವಾರ ತೆರೆ ಕಾಣಬಹುದು.
ಕಬಿನಿಯ ಬಾಕ್ಸಿಂಗ್ ಕೋರ್ಟಿನಲ್ಲಿ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದೆ. 'ಜಾಕಿ, ಜಾಕಿ ಜಾಕಿ ಜಾಕಿ...' ಎಂಬ ಟೈಟಲ್ ಹಾಡಿನ ಶೂಟಿಂಗ್ ಇಲ್ಲಿ ನಡೆದಿದೆ. ಬಾಕ್ಸಿಂಗ್ ಜತೆ ಹಾಡು ಬೆರೆತು ವಿಶೇಷ ಅರ್ಥ ನೀಡುವ ಕಾರ್ಯ ಮಾಡುತ್ತಿದೆ. ಎಲ್ಲಕ್ಕಿಂತ ಭಿನ್ನವಾಗಿ ಈ ಹಾಡು ತೆರೆಯ ಮೇಲೆ ಮೂಡಿಬರಲಿದೆ ಎನ್ನಲಾಗುತ್ತಿದೆ.
ಕೋರಿಯೋಗ್ರಾಫರ್ ಇಮ್ರಾನ್ ಸೆಟ್ ಹಾಕುವ ಕೆಲಸವನ್ನು ಅತ್ಯಂತ ಮುತುವರ್ಜಿಯಂದ ಮಾಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿತ್ತು. ನಿಜಕ್ಕೂ ಇಲ್ಲೊಂದು ಹೊಸ ಜಗತ್ತು ತೆರೆದುಕೊಂಡಂತೆ ಭಾಸವಾಗುತ್ತಿತ್ತು. ವಿಭಿನ್ನ ಹಾಗೂ ವಿಶಿಷ್ಟ ಹಾಡಿಗೆ ಈ ಒಂದು ಸೆಟ್ ಸೂಟ್ ಆಗುತ್ತಿತ್ತು.
'ಎಕ್ಕಾ, ರಾಜಾ, ರಾಣಿ ನನ್ನ ಕೈಯೊಳಗೆ...' ಎನ್ನುವ ಇನ್ನೊಂದು ಹಾಡು ಕುಶಾಲ್ ನಗರದಿಂದ 15 ಕಿ.ಮೀ. ದೂರದಲ್ಲಿರುವ ಕಾಡಿನಲ್ಲಿ ಮಾಡಿದ್ದರು. ಈ ಕಾಡಲ್ಲಿ ಸೆಟ್ ಹಾಕಿದ್ದು ನಿರ್ದೇಶಕ ಸೂರಿ. ಹೆಸರಿಗೆ ತಕ್ಕಂತೆ ಈ ಹಾಡಲ್ಲಿ ಮನಸ್ಸಿಗೆ ಬಂದಂತೆ ಹೆಜ್ಜೆ ಹಾಕಿದ್ದಾರೆ ಪುನೀತ್.
ಇನ್ನು 'ಎಡವಟ್ಟಾಯ್ತು, ತಲೆಕೆಟ್ಟೋಯ್ತು...' ಹಾಡನ್ನು ನಮೀಬಿಯದ ಮರಳುಗಾಡಿನಲ್ಲಿ ಶೂಟ್ ಮಾಡಲಾಗಿದೆ. ಹಿಂದಿಯ ಗಜನಿ ಚಿತ್ರದ ಹಾಡು ಕೂಡಾ ಇಲ್ಲೇ ಶೂಟ್ ಆಗಿತ್ತು ಎನ್ನುವುದು ಇನ್ನೊಂದು ವಿಶೇಷ. ಮಾಮೂಲಿ ಜಾಗದಲ್ಲೇ ಡಾನ್ಸ್ ಮಾಡುವುದು ಬಹಳ ಕಷ್ಟ. ಆದರೆ ಪುನಿತ್ ಮರಳುಗಾಡಲ್ಲೂ ಲೀಲಾಜಾಲವಾಗಿ ಸ್ಟೆಪ್ ಹಾಕಿದರು ಅನ್ನುತ್ತಾರೆ ಸೂರಿ.
ಹರಿಕೃಷ್ಣ ಟ್ಯೂನ್, ಯೋಗರಾಜ್ ಭಟ್ಟರ ಹಾಡು ಚಿತ್ರಕ್ಕಿದ್ದು ಎಲ್ಲಾ ಹಾಡುಗಳೂ ಈಗಾಗಲೇ ಆಡಿಯೋ ರೂಪದಲ್ಲಿ ಸೂಪರ್ ಹಿಟ್ ಆಗಿವೆ. ತೆರೆಯ ಮೇಲೆ ಇನ್ನು ನೋಡಬೇಕು.