ಅಕ್ಟೋಬರ್ 15ರ ಶುಕ್ರವಾರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್! ಏನಪ್ಪಾ ಇದು ಅಂತ ಆಶ್ಚರ್ಯಪಡಬೇಡಿ. ಈ ದಿನ ಬಹುನಿರೀಕ್ಷಿತ ಎರಡು ಚಿತ್ರಗಳು ಹೊರಬರಲಿವೆ ಎನ್ನಲಾಗುತ್ತಿದೆ. ಆ ಪೈಕಿ ಒಂದು ಸುದೀಪ್- ರಮ್ಯಾ ಜೋಡಿಯ ಕಿಚ್ಚ ಹುಚ್ಚ ಆಘಿದ್ದರೆ, ಇನ್ನೊಂದು ಪುನೀತ್- ಭಾವನಾ ಮೆನನ್ ಜೋಡಿಯ ಜಾಕಿ!
ಹೌದು. ಆದರೆ ಚಿತ್ರಗಳ ನಿರ್ಮಾಪಕರಿಂದ ಅಧಿಕೃತವಾಗಿ ಈ ವಿಷಯ ಹೊರಬಂದಿಲ್ಲ. ಮೂಲಗಳ ಪ್ರಕಾರ ಗಾಂಧಿನಗರದಲ್ಲೀಗ ಇದರದ್ದೇ ಸುದ್ದಿ. ಪುನೀತ್ ಹಾಗೂ ಸುದೀಪ್ ಎಂಬ ಇಬ್ಬರು ಸೂಪರ್ ಹೀರೋಗಳ ಚಿತ್ರಗಳು ಒಂದೇ ದಿನ ಬರುತ್ತಿರುವುದರಿಂದ ಪ್ರೇಕ್ಷಕ ಪ್ರಭು ಮಾತ್ರ ತಬ್ಬಿಬ್ಬಾಗಿದ್ದಾನೆ.
PR
ಕೆ. ಮಂಜು ನಿರ್ದೇಶನದ ಕಿಚ್ಚ ಹುಚ್ಚ ಚಿತ್ರ ಬಹು ದೀರ್ಘ ಸಮಯದಿಂದ ಡಬ್ಬದಲ್ಲಿ ಕುಳಿತಿತ್ತು. ಈ ಚಿತ್ರ ಸುದೀಪ್ನ ಮತ್ತೊಂದು ಚಿತ್ರವಾದ ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕಿಂತ ಮೊದಲೇ ಬಿಡುಗಡೆಯಾಗಬೇಕಿದ್ದರೂ, ಕಾರಣಾಂತರಗಳಿಂದ ಮುಂದೂಡಲ್ಪಡುತ್ತಲೇ ಬಂದಿತ್ತು. ಇದೀಗ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಬಂದಿದೆ. ಬೆಂಗಳೂರಿನ ಸಂತೋಷ್ ಹಾಗೂ ರಾಜ್ಯದೆಲ್ಲೆಡೆಯ ಇನ್ನಿತರ ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ. ಆ ಮೂಲಕ ಮತ್ತೆ ಮುಸ್ಸಂಜೆ ಮಾತಿನ ಜೋಡಿ ಮೋಡಿ ಮಾಡಲಿದ್ದಾರೆ.
ಇನ್ನು ದುನಿಯಾ ಖ್ಯಾತಿಯ ಸೂರಿ ನಿರ್ದೇಶನ ಜಾಕಿ ಚಿತ್ರ ಈಗಾಗಲೇ ರಾಜ್ಯದೆಲ್ಲೆಡೆ ತನ್ನ ಸಂಗೀತದ ಮೂಲಕ ಜಾದು ಮಾಡಿದೆ. ಎಲ್ಲಿ ಕಿವಿ ತೂರಿಸಿದರೂ, ಜಾಕಿ ಜಾಕಿ ಜಾಕಿ ಜಾಕಿ... ಎಂಬ ಸದ್ದೇ ರಿಂಗಿಣಿಸುತ್ತಿದೆ. ಹಾಗಾಗಿ ಪ್ರೇಕ್ಷಕ ಪ್ರಭು ಈಗಾಗಲೇ ಈ ಚಿತ್ರದಲ್ಲಿ ಪುನೀತ್ ಅವರ ಡಿಫರೆಂಟ್ ಲುಕ್ಕನ್ನು ನೋಡಲಸು ತುದಿಗಾಲಲ್ಲಿ ನಿಂತಿದ್ದಾರೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಒಟ್ಟಾರೆ ಪ್ರೇಕ್ಷಕ ಪ್ರಭು ಮೊದಲು ಯಾವುದಕ್ಕೆ ಮುಖ ಮಾಡುತ್ತಾನೆ ಎಂಬುದಕ್ಕೆ ಕಾಲ ಉತ್ತರ ನೀಡಲಿದೆ.