ಶಂಕರ್ ನಾಗ್ ನುಡಿನಮನ: 'ನಮ್ಮ ಶಂಕರ' ಇಂದಿಗೂ ಇದ್ದಿದ್ದರೆ?
ರಾಧಿಕಾ ವಿಟ್ಲ
PR
ಛೇ, ಅವರು ಬದುಕಿದ್ದರೆ? ಹೀಗೆ ಯೋಚಿಸುವುದು ನಾನೊಬ್ಬಳೇ ಅಲ್ಲ, ಬಹುತೇಕ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಿರುತ್ತಾರೆ. ಕಾರಣ ಅವರು ಶಂಕರ್‌ನಾಗರ ಕಟ್ಟೆ ಅರ್ಥಾತ್ 'ಶಂಕರ್ ನಾಗ್'! ಈ ಹೆಸರಿಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲ. ಅದೇ ಎಲ್ಲವನ್ನೂ ಹೇಳುತ್ತದೆ.
ಆಗಿನ್ನೂ ನನ್ನದು ತುಂಬಾ ಸಣ್ಣ ವಯಸ್ಸು. ಆಗ ಮನೆಯಲ್ಲಿದ್ದ ಪುಟಾಣಿ ಕಪ್ಪು ಬಿಳುಪಿನ ಟಿವಿಯಲ್ಲಿ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿ ಪ್ರತಿನಿತ್ಯವೂ ರಾತ್ರಿ ಹೊತ್ತು ಪ್ರಸಾರವಾಗುತ್ತಿತ್ತು. ಆಕಾಶದೆತ್ತರಕ್ಕೆ ಕಟ್ಟಿದ್ದ ಆಂಟೆನಾ ಆಗೀಗ ಗಾಳಿಯಾಡುವಾಗಲೆಲ್ಲ ತೊನೆದಾಡಿ ಮಸುಕಾಗುತ್ತಿದ್ದ ಚಿತ್ರಗಳನ್ನೂ ಯಾವುದೇ ಕಿರಿಕಿರಿಯಿಲ್ಲದಂತೆ, ಪುಸ್ತಕಗಳನ್ನೆಲ್ಲಾ ಟಿವಿ ಮುಂದೆ ರಾಶಿ ಹಾಕಿ ಬರೆಯುವ ನಾಟಕವಾಡುತ್ತಾ ಟಿವಿ ನೋಡುತ್ತಿದ್ದೆ. ಆಗ ನಮ್ಮೂರಲ್ಲಿ ಚಿತ್ರ ಮಂದಿರ ಇರಲಿಲ್ಲ. ಇದ್ದರೂ ಆಗ ಸಿನೆಮಾ ನೋಡಲು ಹೋಗೋದು ತೀರಾ ಕಡಿಮೆಯೇ. ನಾನಿದ್ದ ದಕ್ಷಿಣ ಕನ್ನಡದ ಪರಿಸರದಲ್ಲಿ ಅಂದಿನ ಕಾಲದಲ್ಲಿ ಚಿತ್ರರಸಿಕತನ ಇದ್ದುದು ಸ್ವಲ್ಪ ಕಡಿಮೆಯೇ ಆಗಿದ್ದರಿಂದಲೋ ಏನೋ, ಸಿನಿಮಾ ನೋಡೋ ಅವಕಾಶ ನನಗಾಗ ಇರಲಿಲ್ಲ. ಹಾಗಾಗಿಯೇ, ನನಗೆ ಶಂಕರ್ ನಾಗ್ ಎಂದಾಕ್ಷಣ ಮೊದಲು ನನಗೆ ನೆನಪಾಗುವುದು ಮಾಲ್ಗುಡಿ ಡೇಸ್.
ಹೌದು. ಮಾಲ್ಗುಡಿ ಡೇಸ್ ಭಾರತೀಯ ಧಾರಾವಾಹಿ ಕ್ಷೇತ್ರದಲ್ಲೊಂದು ಕ್ರಾಂತಿ. ಆ ಕ್ರಾಂತಿಯ ಹರಿಕಾರ ನಮ್ಮ ಶಂಕರ್ ನಾಗ್. ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಯನ್ನು ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ನಮ್ಮದೇ ಕನ್ನಡ ನಾಡಿನ ಆಗುಂಬೆಯಲ್ಲಿ ಚಿತ್ರೀಕರಿಸಿ ಡಿಡಿ1ರ ಮೂಲಕ ಭಾರತದಾದ್ಯಂತ ಪ್ರಸಾರ ಕಂಡು ಭಾರೀ ಜನಮೆಚ್ಚುಗೆ ಗಳಿಸಿ ಹಲವಾರು ಬಾರಿ ಮರು ಪ್ರಸಾರ ಕಂಡ ಧಾರಾವಾಹಿ ಅದು. ಆ ಮೂಲಕ ಶಂಕರ್‌ನಾಗ್ ಕೇವಲ ಕನ್ನಡ, ಮರಾಠಿ, ಹಿಂದಿ ಮಾತ್ರವಲ್ಲ. ಪ್ರತಿ ಭಾರತೀಯರ ಹೃದಯದಲ್ಲೂ ವಿರಾಜಮಾನರಾದರು. ಈಗಲೂ ಹಲವರು ಕೇಳುವುದುಂಟು ಮಾಲ್ಗುಡಿ ಎಲ್ಲಿದೆ ಎಂದು. ಅಸಲಿಗೆ ಅಂಥ ಊರೇ ಇಲ್ಲ ಎಂಬುದು ಈಗಲೂ ಹಲವರಿಗೆ ಗೊತ್ತಿಲ್ಲ, ಆಗುಂಬೆಯೇ 'ಮಾಲ್ಗುಡಿ'ಯಾಗಿತ್ತು! ಅಂಥ ಜನಪ್ರಿಯತೆ ಸಿಕ್ಕಿತ್ತು ಮಾಲ್ಗುಡಿಗೆ!
ಶಂಕರ್‌ನಾಗ್ ಪ್ರಾಣಕ್ಕೆ ಸೆ.30ರಂದು ಅಪಾಯವಿದೆ ಎಂದು ಮೊದಲೇ ಜ್ಯೋತಿಷ್ಯರೊಬ್ಬರು ಶಂಕರ್ ತಾಯಿಯಲ್ಲಿ ಎಚ್ಚರಿಕೆ ನೀಡಿದ್ದರಂತೆ! ಅದಕ್ಕಾಗಿ ಶಂಕರ್- ಅನಂತ್ ಇಬ್ಬರನ್ನೂ ಜೋಪಾನವಾಗಿ ಕಾಪಾಡಲು ಮಾಡಿದ ಅಮ್ಮನ ಪ್ರಯತ್ನ ವ್ಯರ್ಥವಾಯಿತು. ಭವಿಷ್ಯ ನಿಜವಾಯಿತು ಎಂದು ಅನಂತನಾಗ್ ಹಿಂದೊಮ್ಮೆ ಹೇಳಿಕೊಂಡಿದ್ದರು.
ಹೌದು. ಶಂಕರ್ ನಾಗ್! ಬದುಕಿದ್ದು ಕೇವಲ 35 ವರ್ಷ. ಮಾಡಿದ ಸಾಧನೆ ಅತ್ಯಪೂರ್ವ. ಅವರು ನಮ್ಮಿಂದ ಭೌತಿಕವಾಗಿ ದೂರವಾಗಿ ಇಂದಿಗೆ ಸರಿಯಾಗಿ 20 ವರ್ಷಗಳೇ ಸಂದಿವೆ. 1990ರ ಸೆ.30ರಂದು ಅಫಘಾತದಲ್ಲಿ ದುರ್ಮರಣಕ್ಕೀಡಾದ ಶಂಕರ್ ತನ್ನ 12 ವರ್ಷಗಳ ವೃತ್ತಿ ಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ, ರಂಗಭೂಮಿಯಲ್ಲೂ ಮೇಳೈಸಿ, ಟಿವಿಯಲ್ಲೂ ಮಿಂಚಿ, ಸಾಮಾಜಿಕವಾಗಿ ಹತ್ತು ಹಲವು ಕೈಂಕರ್ಯಗಳನ್ನು ಕೈಗೊಂಡು ಇಂದಿಗೂ ಪ್ರತಿಯೊಬ್ಬನ ಮನದಲ್ಲಿ ನೆಲೆಸಿದ್ದಾರೆಂಬುದು ಸಾಮಾನ್ಯವಾದ ಮಾತಲ್ಲ.
ಹಾಗೆ ನೋಡಿದರೆ, ಶಂಕರ್‌ನಾಗ್ ಅವರಿಗೆ ಆರಂಭದ ದಿನಗಳಲ್ಲಿ ಕನ್ನಡ ಬರುತ್ತಿದ್ದುದು ಅಷ್ಟಕ್ಕಷ್ಟೇ. ಕನ್ನಡ ನಾಡಿದ ಹೊನ್ನಾವರದಿಂದ ಮುಂಬೈಗೆ ಪಯಣ ಬೆಳೆಸಿದ ಅಪ್ಪ ಅಮ್ಮನ ಜೊತೆಗೆ ಹೋದ ಶಂಕರ್ ನಾಗ್ - ಅನಂತನಾಗ್ ಸಹೋದರರು ಕಲಿತದ್ದು ಹಿಂದಿ, ಮರಾಠಿ, ಇಂಗ್ಲೀಷ್. ಮನೆ ಭಾಷೆ ಕೊಂಕಣಿಯಾದ್ದರಿಂದ ಕನ್ನಡ ಅಷ್ಟಕ್ಕಷ್ಟೇ. ಆದರೆ, ಅಣ್ಣ ತಮ್ಮ ಇಬ್ಬರೂ ಮನೆ ಭಾಷೆ ಕೊಂಕಣಿಯಾದರೂ ಬೆಂಗಳೂರಿಗೆ ಬಂದ ಮೇಲೆ ಮನೆಯಲ್ಲೂ ಕನ್ನಡ ಮಾತಾಡಿ ಕನ್ನಡ ಕರಗತ ಮಾಡಿಕೊಂಡು ಕನ್ನಡದಲ್ಲಿ ಬೆಳೆದ ಹಾದಿಯಿದೆಯಲ್ಲ ಅದು ಅನನ್ಯವಾದದ್ದು. ಮುಂಬೈಯಲ್ಲಿ ಇಂಗ್ಲೀಷ್ ನಾಟಕವೊಂದರಲ್ಲಿ ಅಮೋಘವಾಗಿ ಅಭಿನಯಿಸಿದ ಶಂಕರ್ ನಾಗ್ ಎಂಬ ಒರಟು ಮೀಸೆಯ ಹುಡುಗ ಸೆಳೆದಿದ್ದು ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು. ಗಿರೀಶ್ ತಮ್ಮ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೆ ನಾಯಕನನ್ನಾಗಿ ಮಾಡಲು ಬೆಂಗಳೂರಿಗೆ ಶಂಕರನ್ನು ಎಳೆದು ತಂದರು. ನಂತರ ಶಂಕರ್ ಮತ್ತೆ ನಮ್ಮವರಾಗಿ ಹೋದರು. ಬಹುಬೇಗ ಕನ್ನಡ ಕಲಿತರು. ಹಿಂದಿ ಚಿತ್ರರಂಗ, ಕನ್ನಡ ಚಿತ್ರರಂಗ, ಮರಾಠಿ ಹಾಗೂ ಕನ್ನಡ ರಂಗಭೂಮಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದರು. ಚಿತ್ರ ಬದುಕಿನ 10-12 ವರ್ಷಗಳಲ್ಲೇ ಅಮೋಘ ಸಾಧನೆ ಮಾಡಿ ಹೋದರು.
PR
ಕುರುಚಲು ಗಡ್ಡ, ಗಡುಸು ಮಾತು, ನಕ್ಕರೆ ಹೊರಬರುವ ಸಿಗರೇಟಿನ ಹೊಗೆ, ಕಣ್ಣ ತುಂಬಾ ಕನಸು ಹೊತ್ತು 'ನೋಡಿ ಸ್ವಾಮಿ ನಾವಿರೋದೇ ಹೀಗೆ' ಎಂದ ಶಂಕರ್ ನಾಗ್, ತನ್ನಣ್ಣ ಅನಂತ್ ನಾಗ್ ಜೊತೆ ಸೇರಿಕೊಂಡು ಕನಸುಗಳ ಮೂಟೆ ಕಟ್ಟಿ ಅಂದಿನ ಕಾಲಕ್ಕೇ ಸಂಕೇತ್ ಎಂಬ ಸ್ಟುಡಿಯೋ ಬೆಂಗಳೂರಲ್ಲೇ ಸಾಲ ಮಾಡಿ ಸ್ಥಾಪಿಸಿದ್ದರು. ಸಂಕೇತ್ ಎಂಬ ನಾಟಕ ತಂಡವನ್ನೂ ಕಟ್ಟಿದರು. ಆ ಮೂಲಕ ಹಲವಾರು ನಾಟಕಗಳನ್ನೂ ನೀಡಿ ಕನ್ನಡ ರಂಗಭೂಮಿಯಲ್ಲೂ ಕ್ರಿಯಾಶೀಲರಾಗಿದ್ದವರು. ಆಗಿನ ಕಾಲಕ್ಕೇ ಭವಿಷ್ಯದ ಬೆಂಗಳೂರಿಗೆ ಕನಸಿನ ಭಾಷ್ಯ ಬರೆದವರು. ಬೆಂಗಳೂರಿಗೊಂದು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ, ಜನಸಾಮಾನ್ಯನ ಅಗ್ಗದ ಮನೆ ಕನಸಿಗೆ ಹೊಸ ತಂತ್ರಜ್ಞಾನ, ಸಿನಿಮಾಕ್ಕಾಗಿ ಮಲ್ಟಿಪ್ಲೆಕ್ಸ್ ಇವೆಲ್ಲವುಗಳ ಸಾಕಾರಕ್ಕೆ ಆಗಿನ ಕಾಲಕ್ಕೇ ಕನಸು ಕಂಡವರು. ಅದಕ್ಕಾಗಿಯೇ ರಾಮಕೃಷ್ಣ ಹೆಗಡೆ ಕಾಲದಲ್ಲಿ ಅಣ್ಣ ತಮ್ಮ ಇಬ್ಬರೂ ರಾಜಕೀಯಕ್ಕೂ ಇಳಿದಿದ್ದರು. ಆದರೆ ಅವರ ಭವಿಷ್ಯದ ಬೆಂಗಳೂರು ಕನಸ್ಯಾವುವೂ ಅವರಿದ್ದಾಗ ನನಸಾಗಲಿಲ್ಲ ಬಿಡಿ.
ನಟನಾಗಿದ್ದಕ್ಕಿಂತಲೂ ನಿರ್ದೇಶಕನಾಗಿಯೇ ಧನ್ಯತೆ ಕಂಡ ಶಂಕರ್ ನಾಗ್ ನಿರ್ದೇಶಿಸಿದ ಚಿತ್ರಗಳಲ್ಲಿ ಮಿಂಚಿನ ಓಟ, ಗೀತಾ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಆಕ್ಸಿಡೆಂಟ್, ಒಂದು ಮುತ್ತಿನ ಕಥೆ, ಮಾಲ್ಗುಡಿ ಡೇಸ್... ಹೀಗೆ ಎಲ್ಲವೂ ಈಗಲೂ ಚಿತ್ರರಂಗದ ಮಾಸ್ಟರ್ ಪೀಸ್‌ಗಳು. ಒಂದಾನೊಂದು ಕಾಲದಲ್ಲಿ, ಪ್ರೀತಿ ಮಾಡು ತಮಾಷೆ ನೋಡು, ಮೂಗನ ಸೇಡು, ಹದ್ದಿನ ಕಣ್ಣು, ಕರಿ ನಾಗ, ಮಿಂಚಿನ ಓಟ, ಗೀತಾ, ಬೆಂಕಿ ಚೆಂಡು, ಆಟೋ ರಾಜ, ಪರಮೇಶಿ ಪ್ರೇಮ ಪ್ರಸಂಗ, ಆಕ್ಸಿಡೆಂಟ್, ಅಪೂರ್ವ ಸಂಗಮ, ಎಸ್ ಪಿ ಸಾಂಗ್ಲಿಯಾನಾ 1 ಹಾಗೂ 2, ಸಿಬಿಐ ಶಂಕರ್... ಎಲ್ಲವೂ ಅವರ ಅಭಿನಯ ಚಾತುರ್ಯಕ್ಕೆ ಹಿಡಿದ ಕನ್ನಡಿ. ಡಾ.ರಾಜ್ (ಚಿತ್ರ- ಅಪೂರ್ವ ಸಂಗಮ), ವಿಷ್ಣುವರ್ಧನ್ ಹೀಗೆ ಮೇರು ನಟರ ಜೊತೆಗೂ ಬಣ್ಣ ಹಚ್ಚಿದ ಅನುಭವವೂ ಶಂಕರ್‌ದು.
ಶಂಕರ್‌ನಾಗ್ ತನ್ನ ಚಿತ್ರಗಳು ಉತ್ತಮವಾಗಿರದಿದ್ದರೂ, ಚೆನ್ನಾಗಿದೆ ಎಂದು ವಿಮರ್ಶೆ ಬರೆದಿದ್ದಕ್ಕೆ ಪತ್ರಕರ್ತನಿಗೇ ಬೈದು ಬಿಟ್ಟಿದ್ದರಂತೆ. ಏನ್ರಯ್ಯಾ ಚಿತ್ರ ಚೆನ್ನಾಗಿದೆ ಎಂದು ಬರೆದಿದ್ದೀರಲ್ಲಾ, ಇಂಥಾ ಚಿತ್ರಕ್ಕೆಲ್ಲಾ ಚೆನ್ನಾಗಿದೆ ಎಂದು ವಿಮರ್ಶೆ ಬರೆದ್ರೆ ಹೇಗೆ ಎಂದಿದ್ದರಂತೆ!
ಪತ್ನಿ ಅರುಂಧತಿ ಮಗಳು ಕಾವ್ಯ ಜೊತೆ 'ಇದ್ದರೆ ಹೀಗಿರಬೇಕು' ಎಂದು ಬದುಕಿ ತೋರಿಸಿದ 'ನಮ್ಮ ಶಂಕರ' ಈಗಿಲ್ಲ. ಪತ್ನಿ ಅರುಂಧತಿ ನಾಗ್ ಬೆಂಗಳೂರಿನ ಜೆಪಿ ನಗರದಲ್ಲೊಂದು 'ರಂಗ ಶಂಕರ' ಕಟ್ಟಿ ಶಂಕರ್ ರಂಗಭೂಮಿ ಕನಸಿಗೊಂದು ವೇದಿಕೆ ಕಟ್ಟಿದ್ದಾರೆ. ಜೆಪಿನಗರದ ಪರಿಸರದಲ್ಲಿ ಅದು ವಿಭಿನ್ನವಾಗಿ ಮೈಯೆತ್ತಿ ನಿಂತು ಪ್ರತಿಯೊಬ್ಬರ ದೃಷ್ಟಿಯನ್ನೂ ಒಮ್ಮೆ ತನ್ನತ್ತ ಸೆಳೆಯುತ್ತದೆ, ಥೇಟ್ ಶಂಕರ್ ನಾಗ್ ಅವರ ಹಾಗೆಯೇ! ಈಗಲೂ ಅಲ್ಲಿ ನೂರಾರು ಮಂದಿ ಕಲಾವಿದರು, ರಂಗಾಸಕ್ತರು ದಿನವೂ ಬಂದು ಹೋಗುತ್ತಾರೆ, ಕನಸು ಕಾಣುತ್ತಾರೆ. ಆದರೆ ಶಂಕರ್ ಮಾತ್ರ ಅಲ್ಲಿಲ್ಲ. ಮತ್ತೆ ಹುಟ್ಟಿಯೂ ಬಂದಿಲ್ಲ. ನೆನಪು ಮಾತ್ರ ಇದೆ. ಇಂದಿಗೂ ಆತ ಇದ್ದಿದ್ದರೆ...?