ಅಂತೂ ಇಂತೂ ಕಳೆದ ವರ್ಷ ಏಪ್ರಿಲ್‌ನಲ್ಲಿ ಮುಹೂರ್ತವಾಗಿದ್ದ 'ವಿಚಿತ್ರ ಪ್ರೇಮಿ'ಯ ಚಿತ್ರೀಕರಣ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಜ್ಜಾಗಿದೆ.
ದಾವಣಗೆರೆಯಲ್ಲಿ ನಡೆಯುತ್ತಿರುವ ನೈಜ ಘಟನೆಯ ಸುತ್ತ ಒಂದಿಷ್ಟು ಮಸಾಲೆ ಹಚ್ಚಿ ನೀಡಲಾದ ಚಿತ್ರ ಇದಂತೆ. ಒಬ್ಬೊಬ್ಬರ ಜೀವನದಲ್ಲೂ ಪ್ರೀತಿ ಒಂದೊಂದು ಥರಾ ಪ್ರವೇಶ ಮಾಡುತ್ತದೆ. ಕೆಲವರಲ್ಲಿ ಉಳಿಯುತ್ತದೆ. ಇನ್ನು ಕೆಲವರಲ್ಲಿ ಅಳಿಯುತ್ತದೆ. ಆದರೆ ಅಳಿಯದೇ ಉಳಿಯುವ ಪ್ರೇಮ ಕಥೆ ಈ ವಿಚಿತ್ರ ಪ್ರೇಮಿಯ ಕಥೆ.
ಇಬ್ಬರು ವೈದ್ಯ ವಿದ್ಯಾರ್ಥಿಗಳ ನಡುವಿನ ಪ್ರೇಮಕಥೆ ಇದಾಗಿದೆ. 53 ದಿನ ಚಿತ್ರೀಕರಣ ನಡೆಸಿ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಆರ್ಥಿಕ ಸಮಸ್ಯೆ ಎದುರಾದದ್ದು ಚಿತ್ರ ಹೊರಬರಲು ತಡವಾಯಿತು ಎನ್ನಲಾಗುತ್ತಿದೆ. ಸಾಕಷ್ಟು ಹಿರಿಯ ನಟರನ್ನು ಒಳಗೊಂಡಿರುವ ಚಿತ್ರಕ್ಕೆ ಕುರುಡಿ ಬಣಕಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅತ್ಯಂತ ಮಹತ್ವದ ಪಾತ್ರ ಇವರೇ ನಿರ್ವಹಿಸಿದ್ದಾರೆ ಎನ್ನಬಹುದು. ಏಕೆಂದರೆ ಚಿತ್ರದ ನಾಯಕ ಹಾಗೂನಿರ್ಮಾಪಕ ರವಿಕುಮಾರ್ ಚಿತ್ರರಂಗಕ್ಕೆ ಹೊಸಬರು. ಆದರೆ ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದಾರೆ.
ತುಮಕೂರು ಹಾಗೂ ಸಕಲೇಶಪುರ ಅಕ್ಕಪಕ್ಕ ಸಾಕಷ್ಟು ಸುಂದರ ತಾಣಗಳಿದ್ದು, ಅಲ್ಲಿ ಚಿತ್ರದ ಹಾಡಿನ ಶೂಟಿಂಗ್ ಮಾಡಲಾಗಿದೆ. ಈ ಮೂಲಕ ಮಧುರ ಹಾಡಿಗೆ ವಿಭಿನ್ನ ತಾಣವನ್ನು ಪರಿಚಯಿಸುವ ವಿಶೇಷ ಅವಕಾಶವೂ ಸಿಕ್ಕಿದೆ. ಒಟ್ಟಾರೆ ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದು, ನಾಯಕ, ನಿರ್ಮಾಪಕರಾಗಿರುವ ರವಿ ಈ ಚಿತ್ರದ ಮೂಲಕ ಗೆದ್ದರೆ ಆಕಸ್ಮಿಕ ಹೀರೋ ಆಗಿ ಮಿಂಚುವಲ್ಲಿ ಸಂಶಯವೇ ಇಲ್ಲ. ಆಲ್ ದಿ ಬೆಸ್ಟ್ ರವಿಕುಮಾರ್.