'ಸಾರಾಯಿ ಶೀಷೆಯಲಿ ನನ್ನ ದೇವಿ ಕಾಣುವಳು...' ಈ ಒಂದು ಹಾಡು ಮೊನ್ನೆ ನಗರದ ಹೊರಗಿರುವ ಡಾಬಾ ಒಂದರಿಂದ ಕೇಳಿ ಬರುತ್ತಿತ್ತು. ಇದೇನು ನಗರದ ಮಂದಿ ತಡರಾತ್ರಿಯವರೆಗೆ ಪಾರ್ಟಿ ಮಾಡಲು ಡಾಬಾಗೆ ತೆರಳುತ್ತಾರೆ ಅನ್ನುವುದು ಗೊತ್ತಿತ್ತು. ಇದೀಗ ಅಲ್ಲಿಯೇ ಗಾನಾ ಬಜಾನಾ ಸಹ ಆರಂಭಿಸಿ ಬಿಟ್ಟರಾ ಅಂದುಕೊಂಡಿರಾ? ಇಲ್ಲಾ, ಇದು ಚಿತ್ರದ ಶೂಟಿಂಗ್ ತಾಣ. ಇಲ್ಲಿಂದಲೇ ಹಾಡಿನ ಸದ್ದು ಕೇಳುತ್ತಿತ್ತು.
ಪ್ರೇಮ ವೈಫಲ್ಯಕ್ಕೆ ಒಳಗಾದ ನಾಯಕ, ನಾಯಕಿಯ ನೆನಪಲ್ಲಿ ಕುಡಿದು ಚಿತ್ ಆಗಿ ಹಾಡುವ ಹಾಡಿದು. ಇದನ್ನು ಹಾಗೆ ಸುಮ್ಮನೆ ಅಂತ ಚಿತ್ರದ ಆಡಿಯೋ ಜತೆ ಸೇರಿಸಲಾಗಿತ್ತು. ಏಕೆಂದರೆ ಇದು ಈಗಾಗಲೇ ಬಿಡುಗಡೆ ಆಗಿ ಡಬ್ಬ ಸೇರಿರುವ 'ಮಾಂಗಲ್ಯ ಸಾಕ್ಷಿ' ಚಿತ್ರದ ಜನಪ್ರಿಯ ಹಾಡು. ಆದರೆ ಆಡಿಯೊ ಜತೆ ನೀಡಿದಾಗ ಅಂದಿಗಿಂತ ಹೆಚ್ಚಾಗಿ ಇಂದು ಇದು ಹಿಟ್ ಆಗಿದೆ.
ಅಭಿಮಾನಿಗಳು ಚಿತ್ರದ ಸಿಡಿಯನ್ನು ಈ ಹಾಡಿಗಾಗಿಯೇ ಕೊಳ್ಳುತ್ತಿದ್ದಾರೆ. ಬಹು ನಿರೀಕ್ಷೆಯಿಂದ ಚಿತ್ರಕ್ಕೆ ಬಂದು, ಇಲ್ಲಿ ಹಾಡು ಇಲ್ಲ ಅಂದರೆ ಬೇಸರ ಪಟ್ಟುಕೊಳ್ಳುವುದು ಸಹಜ. ಆದ್ದರಿಂದ ಜನರಿಗೆ ಬೇಸರ ಆಗಬಾರದು ಎಂದು ಚಿತ್ರದ ಹಾಡಿನ ಯಶಸ್ಸು ಆಧರಿಸಿ ವೀಡಿಯೊ ಚಿತ್ರೀಕರಣವನ್ನೂ ಆರಂಭಿಸಲಾಗಿದೆ. ಇದಕ್ಕಾಗಿ ಬೆಂಗಳೂರು ಹೊರ ವಲಯದ ಡಾಬಾದಲ್ಲಿ ಸೆಟ್ ಹಾಕಲಾಗಿದೆ. ಅಲ್ಲಿ ಚಿತ್ರದ ನಾಯಕ ಲೂಸ್ ಮಾದಾ ಅಲ್ಲಲ್ಲ ಯೋಗೀಶ್ ನಶೆಯ ಮತ್ತಲ್ಲಿ ತೂರಾಡುತ್ತಾ ನರ್ತಿಸುತ್ತಿದ್ದರು. ಈ ಚಿತ್ರದ ಹೆಸರು ದೇವದಾಸ್.
ಒಟ್ಟಾರೆ ಬಹು ದಿನದ ಶೂಟಿಂಗ್ ನಂತರ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ದೇವದಾಸನ ಪಾರೊ ಯಾರು ಎನ್ನುವ ಕುತೂಹಲ ಏನಾದರೂ ಇದ್ದರೆ ಅದನ್ನು ಚಿತ್ರ ಮಂದಿರಕ್ಕೆ ಬಂದು ಅರಿಯಬೇಕು ಎನ್ನಲಾಗುತ್ತಿದೆ.