ಒಂದು ಚಿತ್ರದ ಸಿದ್ಧತೆಗೆ ಮುನ್ನ ಇರುವ ತಂಡ ಕೆಲವೊಮ್ಮೆ ಚಿತ್ರಾರಂಭಕ್ಕೆ ಮುನ್ನವೇ ಬೇರಾಗಿ ಬಿಡುತ್ತದೆ. ಚಿತ್ರರಂಗದಲ್ಲಿ ಕಿತ್ತಾಟ, ಬಡಿದಾಟ ಇದ್ದದ್ದೇ. ಒಂದು ಚಿತ್ರ ಗೆಲ್ಲಲಿ, ಸೋಲಲಿ ಅದೇ ತಂಡ ಇನ್ನೊಂದು ಚಿತ್ರ ಮಾಡುವ ಅವಕಾಶ ಕನ್ನಡ ಚಿತ್ರರಂಗದಲ್ಲಿ ಇಲ್ಲವೇ ಇಲ್ಲ.
ಆದರೆ ಈ ದಾಖಲೆಯನ್ನು ಮುರಿಯುವ ಒಂದು ತಂಡ ಹುಟ್ಟಿದೆ. ಕನ್ನಡದ ಜನಪ್ರಿಯ ಚಿತ್ರ 'ಲವ್ ಗುರು'ವನ್ನು ನಿರ್ಮಿಸಿದ್ದ ತಂಡ ಇದೀಗ 'ಗಾನಾ ಬಜಾನಾ' ಸಹ ನಿರ್ಮಿಸಿದೆ. ಇದೇ ಬರುವ ತಿಂಗಳ 8ರಂದು ಚಿತ್ರ ತೆರೆಕಾಣಲಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.
ಹೌದು, 'ಎಂದಿರನ್' ಚಿತ್ರದ ಬಿಡುಗಡೆ ಆಗಿ ಎಂಟು ದಿನ ನಂತರ ತೆರೆಕಾಣುತ್ತಿರುವ ಈ ಚಿತ್ರದ ನಿರ್ಮಾಪಕರದ್ದು ಗಂಡೆದೆಯೇ ಸರಿ. ಎಂದಿರನ್‌ಗೆ ಸವಾಲಾಗಿ ಯಾವ ಚಿತ್ರವನ್ನೂ ತರಲು ಇಚ್ಚಿಸದ ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಶೇಷ ಯತ್ನ ಅಂದರೂ ತಪ್ಪಿಲ್ಲ.
ಚಿತ್ರದಲ್ಲಿ ರಾಧಿಕಾ ಪಂಡಿತ್ ಹಾಗೂ ತರುಣ್ ನಾಯಕ ನಾಯಕಿಯರು. ವಿಲನ್ ಆಗಿ ಅದೇ ಹರೀಶ್ ರಾಜ್ ಇದ್ದಾರೆ. ನಿರ್ದೇಶಕರಿಂದ ಮೊದಲ್ಗೊಂಡು ತಾಂತ್ರಿಕ ವರ್ಗದವರೆಗೆ ಎಲ್ಲವೂ ಹಳೆ ತಂಡವೇ ಇದೆ.
ಇದುವರೆಗೂ ಗಂಭೀರ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿದ್ದ ರಾಧಿಕಾಗೆ ಇದೊಂದು ಭಿನ್ನ ಪಾತ್ರವಂತೆ. ಗ್ಲಾಮರ್ ಬೆಡಗಿಯಾಗಿ ಇವರು ಕಾಣಿಸುತ್ತಿದ್ದಾರೆ. ತುಂಬಾ ಲೈಟ್ ರೋಲ್ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ತುಂಬಾ ಲಕ್ಷ್ಯಕೊಟ್ಟು ಅಭಿನಯಿಸಿದ್ದೇನೆ. ನಿಜಕ್ಕೂ ಒಂದು ಉತ್ತಮ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ ಎನ್ನುತ್ತಾರೆ.
ಜೋಶ್ವಾ ಶ್ರೀಧರ್ ಸಂಗೀತ ಹಾಗೂ ಪ್ರಶಾಂತ್ ರಾಜ್ ನಿರ್ದೇಶನ ಚಿತ್ರಕ್ಕಿದೆ. ಖಳನಾಯಕನಾಗಿಯೂ ನನಗೊಂದು ಉತ್ತಮ ಹೀರೊಯಿಸಂ ಇರುವ ಪಾತ್ರ ನೀಡಲಾಗಿದೆ. ಒಂದು ಉತ್ತಮ ಚಿತ್ರ ಇದು ಎನ್ನುತ್ತಾರೆ ಹರೀಶ್ ರಾಜ್.