ಮೊನ್ನೆ ಮದುವೆ ಸಮಾರಂಭಕ್ಕೆ ತೆರಳಿದ್ದ ನಟ ಆಶಿಷ್ ವಿದ್ಯಾರ್ಥಿ ತುಂಬಾ ಕೂಗಾಡಿ ಬಿಟ್ಟರಂತೆ. ಈ ಮದುವೆ ನಡೆಯೋಕೆ ಬಿಡಲ್ಲಾ ಅಂತ ತುಂಬಾ ಹೊತ್ತು ಅರಚಾಡಿದರಂತೆ. ನಂತರ ಮದುವೆ ನಡೆಯಿತೋ ಇಲ್ಲವೋ ಗೊತ್ತಾಗಲೇ ಇಲ್ಲ.
ಯಾಕೆಂದ್ರೆ ಡೈರೆಕ್ಟರ್ ಕಟ್ ಅಂದು ಬಿಟ್ಟರು. ಹೌದು ಸ್ವಾಮಿ, ಇದು ಸಿನಿಮಾ ಶೂಟಿಂಗ್ ಅನ್ನುವುದು ಸ್ಥಳದಲ್ಲಿದ್ದ ಜನರಿಗೆ ಗೊತ್ತಾಗಲೇ ಇಲ್ಲವಂತೆ. ಅದ್ದೂರಿ ಮದುವೆ ಸಿದ್ಧತೆ ಹಮ್ಮಿಕೊಂಡಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆಶಿಶ್ ವಿದ್ಯಾರ್ಥಿ ಅರಚಿದ್ದೇ ಅರಚಿದ್ದು, ಅದೆಲ್ಲವನ್ನೂ ನಿರ್ದೇಶಕರು ಶೂಟ್ ಮಾಡಿಕೊಂಡರು.
ಇನ್ನೊಂದು ವಿಶೇಷ ಅಂದರೆ ಚಿತ್ರದಲ್ಲಿ ರವಿಚಂದ್ರನ್ ಮದುಮಗ ಆಗಿದ್ದರು. ಅವರಪ್ಪನ ಪಾತ್ರದಲ್ಲಿಯೂ ಅವರೇ ನಿಂತಿದ್ದರು. ಇದೇನಿದು ವಿಚಿತ್ರ ತಂದೆ- ಮಗ ಇಬ್ಬರೂ ಒಬ್ಬರೇ ಆಗಿದ್ದರಾ ಅಂತ ಅನುಮಾನಿಸಬೇಡಿ. ಇದು ಸತ್ಯ. ರವಿಚಂದ್ರನ್ ದ್ವಿಪಾತ್ರ, ಅದರಲ್ಲೂ ಅಪ್ಪ ಮಗನಾಗಿ ಮಿಂಚಲಿರುವ ಚಿತ್ರ 'ಮಲ್ಲಿಕಾರ್ಜುನ'. ಇದರ ಚಿತ್ರೀಕರಣ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.
ಹಾಡಿನ ಜತೆ ಲವ್ವು, ಡವ್ವು ಅಂತ ಇದ್ದ ರವಿಚಂದ್ರನ್ ಇದೊಂದು ಗಂಭೀರ ಅಭಿನಯಕ್ಕೆ ಎದೆಯುಬ್ಬಿಸಿ ನಿಂತಿದ್ದಾರೆ. 3-4 ದಿನದಿಂದ ಮೈಸೂರಿನ ಕಲ್ಯಾಣ ಮಂಟಪ ಒಂದನ್ನು ಬುಕ್ ಮಾಡಿ ಅಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ ಎಂದಿನಂತೆ ವಿಲನ್.
ಈ ಚಿತ್ರದಲ್ಲಿ ಉತ್ತಮ ಚಿತ್ರಕಥೆಯಿದೆ. ಲೊಕೇಶನ್ ಸಹ ಉತ್ತಮವಾಗಿದೆ. ಒಂದು ವಿಭಿನ್ನ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಒಪ್ಪಿಕೊಂಡಿದ್ದು ಸಾರ್ಥಕ ಅನ್ನಿಸಿದ್ದು ಸುಳ್ಳಲ್ಲ. ನಿಜಕ್ಕೂ ಕನ್ನಡದಲ್ಲಿ ಇದೊಂದು ಉತ್ತಮ ಪಾತ್ರ ನನಗೆ ಸಿಕ್ಕಿದೆ ಎಂದು ಆಶಿಶ್ ಹೇಳಿಕೊಂಡರು.
ಚಿತ್ರದಲ್ಲಿ ಮೂವರು ನಾಯಕಿಯರಂತೆ. ಸದಾ, ಸೀತಾ ಹಾಗೂ ರಮ್ಯಾ ಈ ಮೂವರು ಅನ್ನುವುದು ಖಚಿತವಾಗಿದೆ. ಎಸ್.ಎ. ರಾಜ್‌ಕುಮಾರ್ ಚಿತ್ರಕ್ಕಾಗಿ ಆರು ಹಾಡು ಸಿದ್ಧಪಡಿಸಿದ್ದಾರೆ. ಚಿತ್ರವನ್ನು 'ಹೂ' ನಿರ್ಮಾಪಕ ದಿನೇಶ್ ಗಾಂಧಿ ನಿರ್ಮಿಸಿದ್ದಾರೆ. ಮುರುಳಿ ಮೋಹನ್ ನಿರ್ದೇಶಕರು.