ಸುದೀಪ್ ಅಭಿನಯದ 'ಕಿಚ್ಚ ಹುಚ್ಚ' ಹಾಗೂ ಪುನಿತ್ ರಾಜ್‌ಕುಮಾರ್ ನಟನೆಯ 'ಜಾಕಿ' ಎರಡೂ ಚಿತ್ರ ಒಂದೇ ದಿನ ತೆರೆಗೆ ಬರುತ್ತಿವೆಯಾ?
ಹೌದು ಎನ್ನುವ ಮಾತು ಕೇಳಿ ಬರುತ್ತಿದೆ. ಬಹು ವಿಳಂಬವಾಗಿ ತೆರೆಗೆ ಬರುತ್ತಿರುವ ಕಿಚ್ಚ ಹುಚ್ಚ ಹಾಗೂ ಹೋಂ ಬ್ಯಾನರ್ ಅಡಿ ಸಿದ್ಧವಾಗಿ ಬಹು ನಿರೀಕ್ಷೆ ಹುಟ್ಟಿಸಿರುವ ಜಾಕಿ ಎರಡೂ ಚಿತ್ರ ಒಂದೇ ದಿನ ಬಿಡುಗಡೆ ಆದರೆ ಅದೊಂದು ಹೊಸ ಸಮಸ್ಯೆ ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.
ನಿರ್ದೇಶಕರಾದ ಚಿ. ಗುರುದತ್ ಪಾಲಿಗೆ ಲೇಟ್ ಆಗಿ ಬರುತ್ತಿರುವ ಲೇಟೆಸ್ಟ್ ಚಿತ್ರದ ಮೇಲೆ ಅಪಾರ ವಿಶ್ವಾಸ ಇದೆ. ಈ ನಡುವೆ ಸಾಲು ಸಾಲು ಸುದೀಪ್ ಚಿತ್ರ ಬಿಡುಗಡೆ ಆಗುತ್ತಲೇ ಇದ್ದುದರಿಂದ ಈ ಚಿತ್ರ ಕೊಂಚ ವಿಳಂಬವಾಯಿತು. ಆದರೆ ಅಕ್ಟೋಬರ್ 14ಕ್ಕೆ ಚಿತ್ರ ತೆರೆ ಕಾಣಲೇ ಬೇಕಾಗಿದೆ ಎನ್ನುತ್ತಾರೆ.
ಇನ್ನು ಈ ಚಿತ್ರದಲ್ಲಿ ಸುದೀಪ್- ರಮ್ಯಾ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಇದು ಇವರ ಕಾಂಬಿನೇಷನ್ನಿನ ನಾಲ್ಕನೇ ಚಿತ್ರ. ಈ ಹಿಂದೆ ರಂಗ ಎಸ್ಎಸ್ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಇವರು ನಟಿಸಿದ್ದರು. ತಮಿಳಿನ ರಿಮೇಕ್ (ಚಿತ್ತಿರಂ ಪೆಸುತಾಡಿ) ಚಿತ್ರವಾದರೂ, ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಪ್ರೀತಿ, ಪ್ರೇಮದ ಜತೆ ಸಾಕಷ್ಟು ಆಕ್ಷನ್ ಧಮಾಕಾವನ್ನು ಚಿತ್ರ ಒಳಗೊಂಡಿದೆ.
ಒಟ್ಟಾರೆ ಚಿ. ಗುರುದತ್ ಬಹು ನೀರೀಕ್ಷೆಯಿಂದ ಸಿದ್ಧಪಡಿಸಿರುವ ಚಿತ್ರ ಇದಾಗಿದೆ. ಸುಮ್ಮನಿದ್ದರೆ ಕಿಚ್ಚ ಕೆರಳಿದರೆ ಹುಚ್ಚ ಎನ್ನುವುದನ್ನು ತೋರಿಸುತ್ತದೆ ಈ ಚಿತ್ರ. ಇದಕ್ಕಿಂತ ಒಂದು ಹಿಡಿ ಜಾಸ್ತಿ ನಿರೀಕ್ಷೆ ಸೂರಿಯವರದ್ದು.