ಎಸ್.ವಿ. ರಾಜೇಂದ್ರಸಿಂಗ್ ಬಾಬು ತಮ್ಮ 100ನೇ ಚಿತ್ರದ ಸಿದ್ಧತೆಯಲ್ಲಿದ್ದು, ಇದಕ್ಕಾಗಿ ಒಂದು ಅದ್ದೂರಿ ಸ್ಕೆಚ್ ಹಾಕಿದ್ದಾರಂತೆ. ಹೌದು, ಬಹಳ ಮಹತ್ವಾಕಾಂಕ್ಷೆಯಿಂದ ಚಿತ್ರ ಮಾಡಲು ಹೊರಟಿರುವ ರಾಜೇಂದ್ರಸಿಂಗ್ ಬಾಬು 'ಅವತಾರ್' ಮಾದರಿಯಲ್ಲಿ ಗ್ರಾಫಿಕ್ಸ್ ಹಾಗೂ ತ್ರೀಡಿ ತಂತ್ರಜ್ಞಾನ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇವರು ಆಯ್ಕೆ ಮಾಡಿಕೊಂಡಿರುವ ಚಿತ್ರ 'ಶ್ರೀಕೃಷ್ಣ'.
ಇವರ ಮೊದಲ ಚಿತ್ರವೂ ಇದೇ ಆಗಿತ್ತು. 100ನೇ ಚಿತ್ರವೂ ಇದೇ ಆಗಲಿದೆ. ಆದರೆ ತೀರಾ ಭಿನ್ನ, ವಿಭಿನ್ನವಾಗಿ ಈ ಚಿತ್ರ ನೀಡಲು ನಿರ್ಧರಿಸಿರುವ ಇವರು ಇದಕ್ಕಾಗಿ 100 ಕೋಟಿ ರೂ. ಹಣ ಹೂಡಲು ನಿರ್ಧರಿಸಿದ್ದಾರಂತೆ. ಒಟ್ಟಾರೆ ದೊಡ್ಡ ಬಜೆಟಿನಲ್ಲಿ ಕೃಷ್ಣನ ಅವತಾರ ತೋರಿಸಲು ಬಾಬು ಮುಂದಾಗಿದ್ದಾರೆ.
ಚಿತ್ರದ ಇನ್ನೊಂದು ವಿಶೇಷ ಅಂದರೆ ಇದು ಕನ್ನಡವೂ ಸೇರಿದಂತೆ ಭಾರತದ 16 ಭಾಷೆಯ ಜತೆ ಒಟ್ಟು 25 ಭಾಷೆಯಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆಯಂತೆ. ಶ್ರೀಕೃಷ್ಣನ ಹುಟ್ಟಿನಿಂದ 17 ಅಥವಾ 25ನೇ ವಯಸ್ಸಿನವರೆಗಿನ ಬೆಳವಣಿಗೆಯನ್ನು ಈ ಚಿತ್ರದ ಮೂಲಕ ತೋರಿಸುವುದು ಉದ್ದೇಶ. ಸಂಬಂಧಿಸಿದವರನ್ನು, ಹಿರಿಯರನ್ನು ಸಂಪರ್ಕಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ.
ಇದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ. ಏಕೆಂದರೆ ಸದ್ಯ ಇವರ 97ನೇ ಚಿತ್ರ ಕುಂಟುತ್ತಾ ಇನ್ನೂ ಸಿದ್ಧತೆಯ ಹಂತದಲ್ಲಿದೆ. ಉಪೇಂದ್ರ ಮತ್ತು ರಮ್ಯಾ ನಾಯಕ-ನಾಯಕಿಯಾಗಿರುವ 'ಭೀಮೂಸ್ ಬ್ಯಾಂಗ್ ಬ್ಯಾಗ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಇದಲ್ಲದೇ ಎರಡು ಕಾದಂಬರಿ ಆಧಾರಿತ ಚಿತ್ರ ಮಾಡುವುದು ಇವರ ಉದ್ದೇಶವಂತೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಭೀಮೂಸ್ ತೆರೆಗೆ ಬರಲಿದೆ ಎನ್ನುವ ಸೂಚನೆ ಅವರೇ ನೀಡಿದ್ದು, ನಂತರದ ಚಿತ್ರದಲ್ಲಿ ಮಗ ಆದಿತ್ಯನನ್ನು ಹಾಕಿಕೊಂಡು ಮಾಡಲಿದ್ದಾರಂತೆ. ಇದರಲ್ಲಿ ನಟಿಸಲು ಸುಹಾಸಿನಿ ಸಹ ಒಪ್ಪಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ.