ಟಿವಿಯಲ್ಲಿ ಇತ್ತೀಚೆಗೆ ಎಲ್ಲೂ ಹಾಸ್ಯದ ಕೊರತೆ ಕಾಡುವುದೇ ಇಲ್ಲ. ಸಾಕಷ್ಟು ಟಿವಿ ಚಾನೆಲ್‌ಗಳು ಹಾಸ್ಯಕ್ಕಾಗಿ ಒಂದಿಷ್ಟು ಸಮಯ ಮೀಸಲಿಡುತ್ತಿವೆ. ಉದಯ ಟಿವಿಯಂತೂ ಪ್ರತ್ಯೇಕ ಚಾನೆಲನ್ನು ಇದಕ್ಕಾಗಿ ಮಾಡಿದೆ. ಹೀಗಿರುವಾಗ ಇದೆಲ್ಲದರ ನಡುವೆ ಸುವರ್ಣ ವಾಹಿನಿಯೂ ಹಾಸ್ಯಕ್ಕಾಗಿ ಒಂದು ವಿನೂತನ ಕಾರ್ಯಕ್ರಮ ಆರಂಭಿಸುತ್ತಿದೆ.
ಇದರ ಸಾರಥ್ಯವನ್ನು ಕಿರುತೆರೆಯ ಜನಪ್ರಿಯ ನಿರೂಪಕ ಹಾಗೂ ನಟ ಸೃಜನ್ ಲೋಕೇಶ್ ವಹಿಸುತ್ತಿದ್ದಾರೆ. ಹೌದು, ಸದ್ಯ ಹೇಳುತ್ತಿರುವುದು 'ಮಜಾ ವಿದ್ ಸೃಜಾ' ಕಾರ್ಯಕ್ರಮದ ಬಗ್ಗೆ. ಆರಂಭಕ್ಕೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿರುವ ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದ ಮೂಲಕ ಹಾಸ್ಯಕ್ಕೆ ಹೊಸದೊಂದು ಲುಕ್ ಕೊಡಲು ನಿರ್ಧರಿಸಲಾಗಿದೆ. ತಡೆರಹಿತ ಹಾಸ್ಯ ರಸದೌತಣ ಈ ಕಾರ್ಯಕ್ರಮದ ಮೂಲಕ ಲಭಿಸುವಲ್ಲಿ ಸಂಶಯವೇ ಇಲ್ಲ. ಒಟ್ಟಾರೆ ದಿನವಿಡೀ ರಜೆಯ ಮುದ ಅನುಭವಿಸುವ ಜನ ಮಾರನೇ ದಿನಕ್ಕೆ ಒಂದು ಉತ್ತಮ ಮೂಡಿನೊಂದಿಗೆ ಎದ್ದೇಳಲಿ ಎನ್ನುವ ಉದ್ದೇಶದಿಂದ ಭಾನುವಾರ ಸಂಜೆ ಮಲಗಲು ಹೊರಡುವ ಸಮಯಕ್ಕೆ ಈ ಕಾರ್ಯಕ್ರಮ ಆರಂಭಿಸಲಾಗುತ್ತಿದೆ.
ಇದನ್ನು ನೋಡಿ ಮಲಗಿದವರು ಮಾರನೇ ದಿನ ಉತ್ತಮ ಉಲ್ಲಾಸದಿಂದ ಎದ್ದು ಕೆಲಸಕ್ಕೆ ಹೊರಡುವಂತೆ ಆಗಬೇಕು ಎನ್ನುವುದು ವಾಹಿನಿಯ ಉದ್ದೇಶ.
ಸೃಜನ್ ಜತೆ ಒಂದಿಷ್ಟು ಸೆಲೆಬ್ರಿಟಿಗಳೂ ಇಲ್ಲಿ ಬರುತ್ತಿರುತ್ತಾರಂತೆ. ಹಾಸ್ಯದ ವಿಮರ್ಶೆ ಇಲ್ಲಿ ಆಗಲಿದೆಯಂತೆ. ಒಟ್ಟಾರೆ ಲಘು ದಾಟಿಯಲ್ಲಿ ಸಮಾಜದ ಇಂದಿನ ಸ್ಥಿತಿಯನ್ನು ಪರಿಚಯಿಸುವ ಕಾರ್ಯ ಆಗಲಿದೆಯಂತೆ. ಇಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಆಧುನಿಕ ಸಂಗತಿಗಳೆಲ್ಲಾ ಪ್ರಸ್ತಾಪವಾಗಲಿದೆಯಂತೆ. ಆಲ್ ದಿ ಬೆಸ್ಟ್ ಸೃಜನ್.