ಕನ್ನಡ ಚಿತ್ರರಂಗದ ಬಗ್ಗೆ ಜನ ಅಸಡ್ಡೆ ತೋರುತ್ತಿದ್ದು, ತಮಿಳು, ತೆಲುಗು ಚಿತ್ರಗಳತ್ತ ಹಾಗೂ ಇನ್ನು ಕೆಲ ಮಂದಿ ಹಿಂದಿ ಹಾಗೂ ಇಂಗ್ಲೀಷ್ ಚಿತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದೆಲ್ಲಾ ಯಾಕೆ ಅನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ.
ಮಾತಿಗೆ ಸಿಕ್ಕ ಚಿತ್ರ ನಿರ್ಮಾಪಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ಅಭಿಪ್ರಾಯ ತೀರಾ ಭಿನ್ನವಾಗಿದೆ. ಹೌದು. ಕತೆ, ಕಾದಂಬರಿ ಆಧರಿತ ಚಿತ್ರ ಮಾಡುವುದನ್ನು ನಿರ್ಮಾಪಕರು ನಿಲ್ಲಿಸಿದ್ದಾರೆ. ಎಲ್ಲರೂ ರಿಮೇಕ್ ಹಿಂದೆ ಬಿದ್ದಿದ್ದು ಸಮಸ್ಯೆಯ ಮೂಲಕ ಕಾರಣ. ಎಲ್ಲಿಯವರೆಗೆ ಜನ ಈ ಮೇನಿಯಾದಿಂದ ಆಚೆ ಬರೊಲ್ಲವೋ ಅಲ್ಲಿಯವರೆಗೂ ಕನ್ನಡ ಚಿತ್ರ ಗೆಲ್ಲುವುದು ಕಷ್ಟ. ಇಲ್ಲಿಯೇ ಸಾಕಷ್ಟು ಕತೆ ಇದೆ. ಕಾದಂಬರಿಗಳಿವೆ. ಅವನ್ನು ಬಳಸಿಕೊಂಡು ಒಂದು ಉತ್ತಮ ಸ್ವಂತ ಚಿತ್ರ ಮಾಡಿದರೆ ಕನ್ನಡದಲ್ಲೂ ನೋಡಬಲ್ಲ ಚಿತ್ರ ಬರಲು ಸಾಧ್ಯ ಎಂದಿದ್ದಾರೆ.
ನಮ್ಮ ಸೋಲಿಗೆ ನಾವೇ ಹೊಣೆ ಎನ್ನುವ ಇವರು ಕನ್ನಡದ ಇಂದಿನ ಸ್ಥಿತಿಗೆ ಹೊರಗಿನವರು ಕಾರಣರಲ್ಲ. ನಾವೇ ತೋಡಿಕೊಂಡ ಗುಂಡಿಯಲ್ಲಿ ಬಿದ್ದಿದ್ದೇವೆ. ಇಲ್ಲಿಂದ ಮೇಲೆ ಬರುವುದು ಸಹ ನಮ್ಮ ಯತ್ನವೇ ಆಗಬೇಕು. ಬೇರೆಯವರು ನಮ್ಮನ್ನು ಎತ್ತುವ ಕೆಲಸ ಮಾಡುವುದಿಲ್ಲ. ಸ್ವಯಂ ಜಾಗೃತಿಯೊಂದೇ ಪರಿಹಾರ. ಚಿತ್ರರಂಗದ ಜನ ಇದನ್ನು ಗಂಭೀರವಾಗಿ ಯೋಚಿಸಬೇಕು ಎನ್ನುತ್ತಾರೆ.
ಇಲ್ಲಿನವರಿಗೆ ನೆಲ, ಜಲ, ಸಂಸ್ಕ್ಕತಿ ಕುರಿತು ಸ್ಪಂಧನೆ ನೀಡುವ ಚಿತ್ರಗಳು ಬೇಕು. ಹಿಂದೆಲ್ಲಾ ಈ ಮಾದರಿಯ ಚಿತ್ರ ಸಾಕಷ್ಟು ಬರುತ್ತಿದ್ದವು. ಅರ್ಥವತ್ತಾದ, ಸಾರಯುಕ್ತ ಚಿತ್ರ ಬಂದು ಹೋಗಿವೆ. ಆದರೆ ಇಂದು ಅರ್ಥವಿಲ್ಲದ ರಿಮೇಕ್ ಚಿತ್ರ ಬರುತ್ತಿವೆ. ಇಲ್ಲಿನ ಸಂಸ್ಕೃತಿಗೆ ಹೇಳಿ ಮಾಡಿಸಿದ ಚಿತ್ರ ಇವಲ್ಲ. ಆದ್ದರಿಂದ ಜನ ಎಲ್ಲೂ ಪ್ರಶ್ನಿಸದೇ ತಮ್ಮ ಪಾಡಿಗೆ ತಾವು ಚಿತ್ರ ಮಂದಿರದಿಂದ ದೂರವೇ ಉಳಿದಿದ್ದಾರೆ. ಇವರನ್ನು ಮರಳಿ ಕರೆತರಲು ಇನ್ನಾದರೂ ಹೊಸ ಪ್ರಯತ್ನ ಆಗಬೇಕು ಎಂದಿದ್ದಾರೆ.