ಗುರುಶಿಷ್ಯರನ್ನು ಒಂದು ಚಿತ್ರದಲ್ಲಿ ಕಾಣುವ ಯೋಗ ವರ್ಷಗಳ ನಂತರವಾದರೂ ಕೂಡಿ ಬರಲಿದೆ ಎನ್ನುವ ಸಂತಸ ಇದೀಗ ಮತ್ತೆ ಆರಂಭವಾಗಿದೆ. ಹೌದು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಹಾಗೂ ನಟ ದಿಗಂತ್ ಹೆಗಡೆ ಗುರು ಶಿಷ್ಯರು. ಈ ವಿಷಯ ಚಿತ್ರರಂಗದ ಕೆಲವು ಮಂದಿಗೆ ಗೊತ್ತು. ಆದರೆ ಪ್ರೇಕ್ಷಕರಿಗೆ ಗೊತ್ತಿದ್ದಂತಿಲ್ಲ. ಅವರಿಬ್ಬರೂ ಜತೆಯಾಗಿ ನಟಿಸಿದ 'ತಾರೆ' ಬಿಡುಗಡೆಗೆ ಸಿದ್ಧವಾಗಿದೆ.
ಎರಡು ವರ್ಷದಿಂದ ಸುದ್ದಿಯಾಗುತ್ತಲೇ ಇದ್ದ ಚಿತ್ರ ಬಿಡುಗಡೆ ಆಗುವುದೇ ಇಲ್ಲವೇನೋ, ಗುರು ಶಿಷ್ಯರನ್ನು ಒಂದೆಡೆ ಕಾಣುವ ಅವಕಾಶ ಪ್ರೇಕ್ಷಕರಿಗೆ ಲಭಿಸುವುದೇ ಇಲ್ಲವೇನೋ ಅಂತ ಗಾಂಧಿನಗರದ ಜನ ಆಡಿಕೊಳ್ಳುತ್ತಿರುವ ನಡುವೆಯೇ ಚಿತ್ರ ಬಿಡುಗಡೆಗೆ ಸನ್ನದ್ಧವಾಗಿದೆ. ಶುಭ ದಿನದ ಘೋಷಣೆ ಆಗಬೇಕಿರುವುದು ಮಾತ್ರ ಬಾಕಿ.
ನಿರ್ಮಾಪಕ ರವೀಶ್ ಅನಾರೋಗ್ಯಕ್ಕೆ ತುತ್ತಾಗಿ ವಿಶ್ರಾಂತಿಯಲ್ಲಿ ಇದ್ದ ಕಾರಣ ಚಿತ್ರ ತೆರೆಗೆ ಬರುವುದು ವಿಳಂಬವಾಗಿದೆ. ಇದೀಗ ಅವರು ಗುಣಮುಖರಾಗಿದ್ದು, ಚಿತ್ರವನ್ನು ಬಿಡುಗಡೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಚಿತ್ರದಲ್ಲಿ ದಿಗಂತ್‌ಗೆ ನಾಯಕಿಯಾಗಿ ಸಂಜನಾ ನಟಿಸಿದ್ದಾರೆ. ಇವರಿಗೆ ಇದು ಮೂರನೇ ಚಿತ್ರ. ಇವರು ಈ ಹಿಂದೆ ರಕ್ಷಕ ಹಾಗೂ ನಾನೂ ನೀನು ಜೋಡಿಯಲ್ಲಿ ನಾಯಕಿಯಾಗಿ ನಟಿಸಿದ್ದರು.
'ತಾರೆ' ಚಿತ್ರದಲ್ಲಿ ದೊಡ್ಡರಂಗೇಗೌಡರದ್ದು ಇಲ್ಲಿ ಪ್ರೊಫೇಸರ್ ಪಾತ್ರ. ಒಟ್ಟಾರೆ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಉತ್ತಮ ಚಿತ್ರಮಂದಿರದ ಹುಡುಕಾಟ ನಡೆದಿದೆ. ಸಿಗುತ್ತಿದ್ದಂತೆ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.
ಪಂಚರಂಗಿ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದಿಗಂತ್ ಪಾಲಿಗೆ ಈ ಚಿತ್ರವೂ ಪ್ರಮುಖವಾಗಿ ಕಾಣುತ್ತಿದೆ.