ಕೇರಳ ಮೂಲದ ವ್ಯಕ್ತಿಯೊಬ್ಬರು ಕನ್ನಡ ಚಿತ್ರ ಮಾಡಲು ಹೊರಟಿದ್ದಾರೆ. ತಮ್ಮ ಕೇರಳದ ಅನುಭವವನ್ನು ಕನ್ನಡ ಚಿತ್ರಕ್ಕಾಗಿ ಧಾರೆ ಎರೆಯುತ್ತಿದ್ದಾರೆ. ಹೌದು, ಕನ್ನಡದ ಜನರ ಭಾವನೆಗೂ, ಕೇರಳಿಗರ ಭಾವನೆಗೂ ಹೆಚ್ಚು ವ್ಯತ್ಯಾಸ ಇಲ್ಲ. ಇದರಿಂದ ಇಲ್ಲಿ ಚಿತ್ರ ಮಾಡಿ ಜನರ ಮೆಚ್ಚುಗೆ ಗಳಿಸಬಹುದು ಎನ್ನುವುದು ನನಗೆ ಗೊತ್ತು. ಕನ್ನಡದಲ್ಲಿ ಇತ್ತೀಚೆಗೆ ಹಾಸ್ಯ ಚಿತ್ರಗಳು ಸಾಕಷ್ಟು ಗೆಲ್ಲುತ್ತಿದ್ದು, ತಾವು ಸಹ ಇದೇ ಮಾದರಿಯ ಚಿತ್ರ ಹಿಡಿದು ಬಂದಿದ್ದಾಗಿ ಹೇಳುತ್ತಾರೆ ಪ್ರವೀಶ್.
ಇವರು 'ಕ್ರೇಜಿ ಕೃಷ್ಣ'ನನ್ನು ಹಿಡಿದು ಕೇರಳದಿಂದ ಕರುನಾಡಿಗೆ ಬಂದಿದ್ದಾರೆ. ಇವರು ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ವಿಶೇಷ ಅಂದರೆ ಚಿತ್ರದ ಚಿತ್ರೀಕರಣ ಸಹ ಈಗಾಗಲೇ ಆರಂಭವಾಗಿ ಬಿಟ್ಟಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.
ಇಲ್ಲಿ ಮೊದಲ ಹಂತದ ಚಿತ್ರೀಕರಣ ಪೂರೈಸಿ ಹೈದರಾಬಾದಿಗೆ ಚಿತ್ರ ತಂಡ ತೆರಳಲಿದ್ದು, ಅಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಪ್ರವೀಶ್ ತಿಳಿಸಿದ್ದಾರೆ.
ಪ್ರಶಾಂತ್ ಮಾಂಬಳ್ಳಿ 'ಕ್ರೇಜಿ ಕೃಷ್ಣ'ದ ನಿರ್ದೇಶಕರು. 'ಸುಗ್ರೀವ' ಚಿತ್ರದ ಮೂಲಕ ಇವರು ಜನರಿಗೆ ಪರಿಚಿತರಾಗಿದ್ದಾರೆ. ಚಿತ್ರದ ಕಥೆಯನ್ನು ಪ್ರಶಾಂತ್ ಅವರೇ ಸಿದ್ಧಪಡಿಸಿದ್ದಾರೆ. ಮೂರು ವರ್ಷ ಹಿಂದೆಯೇ ಅವರು ಚಿತ್ರದ ಕತೆ ಸಿದ್ಧಪಡಿಸಿ ಇಟ್ಟಿದ್ದರಂತೆ. ಉತ್ತಮ ನಿರ್ಮಾಪಕರ ಹುಡುಕಾಟ ಇತ್ತು. ಇದೀಗ ಪ್ರವೀಶ್ ಸಿಕ್ಕಿದ್ದು ಚಿತ್ರ ಆರಂಭವಾಗಿ ಚಿತ್ರೀಕರಣವೂ ಸುಗಮವಾಗಿ ಸಾಗಿದೆ ಎನ್ನುತ್ತಾರೆ.
ರಾಮ್ ನಾರಾಯಣ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಹೊಟೇಲ್ ಹಾಗೂ ಒಂದು ಹಳ್ಳಿಯಲ್ಲಿಯೇ ಚಿತ್ರದ ಬಹುತೇಕ ಭಾಗ ಮುಗಿದು ಹೋಗುತ್ತದೆ. ತಂದೆ ಮಾಡಿದ ತಪ್ಪನ್ನು ತನ್ನ ಮೇಲೆ ಹೊತ್ತುಕೊಳ್ಳುವ ನಾಯಕ ಏನೆಲ್ಲಾ ಬವಣೆ ಪಡುತ್ತಾನೆ ಎನ್ನುವುದು ಚಿತ್ರದ ಕತೆ.
ಹಾಸನದ ಹುಡುಗ ಕಿಶನ್ ಚಿತ್ರದ ನಾಯಕ. ನಾಯಕಿಯಾಗಿ ಕೇರಳ ಮೂಲದ ಸುರಭಿ ಸಂತೋಷ್ ಹಾಗೂ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರೆ. ಪೂಣಚ್ಚ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದವರು. ಕಿಶನ್ ಮತ್ತು ಸುರಭಿಗೆ ಇದೇ ಮೊದಲನೆಯ ಚಿತ್ರವಂತೆ.