ನಟ ಯೋಗೀಶ್ ಅಥವಾ ಲೂಸ್ ಮಾದನನ್ನು ಗೆಲ್ಲಿಸಿಯೇ ಬಿಡಬೇಕೆಂದು ಪಣತೊಟ್ಟು ಇಡೀ ಕುಟುಂಬವೇ ಚಿತ್ರರಂಗದ ಆಳಕ್ಕೆ ಧುಮುಕಿ ಅತ್ಯಂತ ಬ್ಯುಸಿ ಕೆಲಸದಲ್ಲಿ ನಿರತವಾಗಿದ್ದು, ಮನೆಯ ಪ್ರೀತಿಯ ಕುಡಿಯ ಗೆಲುವಿಗಾಗಿ ಇಡೀ ಕುಟುಂಬ ಕಂಕಣತೊಟ್ಟು ನಿಂತಿದೆ.
ಹೌದು ಅಣ್ಣ, ತಾಯಿ, ಅಪ್ಪ ಸೇರಿದಂತೆ ಎಲ್ಲರೂ ಅಭಿನಯ ಹಾಗೂ ತಾಂತ್ರಿಕ ಸಹಕಾರಕ್ಕೆ ಕೈಕಟ್ಟಿ ನಿಂತು ನಿರ್ಮಿಸುತ್ತಿರುವ ಚಿತ್ರ ಯಕ್ಷ. ಇದರಲ್ಲಿ ಲೂಸ್ ಮಾದನೇ ನಾಯಕ. ಸಂಪೂರ್ಣ ಗ್ರಾಫಿಕ್ಸ್ ಹಾಗೂ ಆಧುನಿಕ ತಂತ್ರಜ್ಞಾನದ ಜತೆ ಯೋಗಿಯ ಹಾರ್ಡ್‌ವರ್ಕ್ ಸೇರಿ ಯಕ್ಷ ಭರದಿಂದ ಸಿದ್ಧವಾಗುತ್ತಿದ್ದಾರೆ.
ಯೋಗಿ ಟೈಟಲ್ ಸಾಂಗಲ್ಲಿ ಜೀವಂತ ಹೆಬ್ಬಾವನ್ನು ಹಿಡಿದು ಡಾನ್ಸ್ ಮಾಡಿದ್ದಾರೆ. ಇದಲ್ಲದೇ ಬೆಂಕಿಯನ್ನು ಹಿಡಿದು ತಿರುಗಿಸಿದ್ದಾರೆ. ಇದೊಂದು ಅದ್ಬುತ ಸಾಂಗ್ ಆಗಿದ್ದು, ಚಿತ್ರಕ್ಕೆ ಇದರ ಅಗತ್ಯ ಅಪಾರವಾಗಿದ್ದು, ಎಲ್ಲಾ ರೀತಿಯಲ್ಲೂ ಗುಣಮಟ್ಟದಿಂದ ಕೂಡಿರುವಂತೆ ಸಿದ್ಧಪಡಿಸಲಾಗುತ್ತಿದೆ.
ವಿದೇಶಿ ಹುಡುಗಿಯರು, ಸ್ವದೇಶಿ ಹುಡುಗರನ್ನು ಒಳಗೊಂಡ ತಂಡ ಸಿಕ್ಕಾಪಟ್ಟೆ ನೃತ್ಯ ಮಾಡುವ ಮೂಲಕ ಟೈಟಲ್ ಸಾಂಗ್ಗೆ ಇನ್ನಷ್ಟು ಬೆಲೆ ತಂದು ಕೊಟ್ಟಿತು. ಟೈಟಲ್ ಸಾಂಗ್ ಒಂದ ವಿಭಿನ್ನ ಅರ್ಥ ಕೊಡುವ ರೀತಿಯಲ್ಲಿದ್ದು, ಹೆಸರು ತೋರಿಸುವಾಗ ಹಿನ್ನೆಲೆಯಲ್ಲಿ ಬರುವ ಜಾಳು ಜಾಳು ಹಾಡು ಇದಲ್ಲ ಎನ್ನಲಾಗುತ್ತಿದೆ. ಇಡೀ ಚಿತ್ರವನ್ನು ಕಟ್ಟಿಕೊಡುವ ಕೆಲಸವನ್ನು ಈ ಹಾಡು ಒದಗಿಸುತ್ತದೆ. ಚಿತ್ರಕ್ಕೆ ಒಂದು ಉತ್ತಮ ಆರಂಭ ಒದಗಿಸುವ ಕಾರ್ಯ ಇದು ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ನಾನಾ ಪಾಟೇಕರ್ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು, 'ನಾನವನಲ್ಲ, ನಾನವನಲ್ಲ' ಎಂಬ ಹಾಡಿಗೆ ಥಕಥೈ ಅಂತ ಹೆಜ್ಜೆ ಹಾಕಿದ್ದಾರೆ. ಇದು ಚಿತ್ರ ಮಂದಿರದಲ್ಲಿ ಕುಳಿತ ಅಭಿಮಾನಿಗಳನ್ನು ಹುಚ್ಚು ಹಿಡಿಸುವಂತೆ ಮಾಡುತ್ತದೆ ಎನ್ನುವುದು ನಿರ್ದೇಶಕರ ಮಾತು.