ನಾಲ್ಕು ವಾರದ ಹಿಂದೆ ಬಿಡುಗಡೆ ಎಂದು ಹೇಳಿಸಿಕೊಂಡು ನಂತರ ಅನಿವಾರ್ಯ ಕಾರಣದಿಂದ ಮುಂದೆ ಹೋಗಿದ್ದ 'ಏನೋ ಒಂಥರಾ' ಚಿತ್ರ ಇದೇ ತಿಂಗಳ 29ಕ್ಕೆ ಬಿಡುಗಡೆ ಅಗಲಿದೆ.
ಅದಾಗಲೇ ಚಿತ್ರದ ಬಿಡುಗಡೆ ತಡವಾಗಿದೆ. ಹೀಗಿರುವಾಗ ಬಿಡುಗಡೆ ದಿನ ಘೋಷಣೆ ಆದ ಮೇಲೆ ಏಕಾಏಕಿ ನಿಂತು ಒಂದೂವರೆ ತಿಂಗಳು ತಡವಾಗಿ ಬಿಡುಗಡೆ ಆಗುವ ಅಗತ್ಯ ಏನಿತ್ತು ಎನ್ನುವುದು ಇಂದಿಗೂ ಜನರಿಗೆ ತಿಳಿದಿಲ್ಲ.
ಅದೇ ಚಿತ್ರ ಬಿಡುಗಡೆ ಮುನ್ನಾದಿನ ಸಹೃದಯಯರ ಜತೆ ಚಿತ್ರ ವೀಕ್ಷಿಸುವ ಪರಿಪಾಠ ಇದೆಯಂತಲ್ಲ. ಅಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕು ಅನ್ನಿಸಿದರೆ ಮಾಡುತ್ತಾರೆ ಅನ್ನುವ ಸುದ್ದಿ ಇದೆ. ಅದೇ ರೀತಿ ಈ ಚಿತ್ರವೂ ಆಯಿತೇನೋ, ಇರಲಿ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತದೆ ಅಂದರೆ ಒಂದೂವರೆ ತಿಂಗಳು ಕಾಯೋಣ ಅನ್ನುತ್ತಿದ್ದಾರೆ ಗಾಂಧಿನಗರದ ಜನ.
ಇಷ್ಟೆಲ್ಲಾ ಆಗಿ ಒಂದು ಹಿಟ್ ಚಿತ್ರದ ನೀರೀಕ್ಷೆಯಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಒಂದು ಹಿಟ್ ಚಿತ್ರ ಬೇಕೇ ಬೇಕಾಗಿದೆ. ಇತ್ತೀಚೆಗೆ ಚಿತ್ರದ ಹೊರತಾಗಿ ಬೇರೆ ವಿವಾದದಲ್ಲೇ ಹೆಚ್ಚು ಸುದ್ದಿಯಾಗುತ್ತಿರುವ ಗಣೇಶ್ ಈ ಚಿತ್ರದಲ್ಲಿ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಈ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಎಂಬುದು ವಿವಾದಗಳಿಂದಲೇ ಎಲ್ಲರಿಗೂ ತಿಳಿದು ಹೋಗಿದೆ.
'ಕೂಲ್' ಚಿತ್ರದ ವಿವಾದ ಸಂಪೂರ್ಣ ಬಗೆಹರಿಸಿಕೊಂಡಿರುವ ಗಣೇಶ್, ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್, ಗಿಮಿಕ್‌ಗಳನ್ನು ಪ್ರದರ್ಶಿಸಿದ್ದಾರಂತೆ. ಅದನ್ನು ನೋಡಲು ಜನ ಚಿತ್ರ ಮಂದಿರಕ್ಕೆ ಬಂದೇ ಬರುತ್ತಾರೆ ಅನ್ನುವ ವಿಶ್ವಾಸ ಅವರಿಗೆ. ಈ ಚಿತ್ರ ತಮಿಳಿನಿಂದ (ಖುಷಿ) ತೆಲುಗು, ಹಿಂದಿ ನಂತರ ಕನ್ನಡಕ್ಕೂ ಬರುತ್ತಿರುವುದು ವಿಶೇಷ.
ಚಿತ್ರದಲ್ಲಿನ ತಮಿಳು ಮೂಲದ ಟ್ಯೂನ್‌ಗೆ ಒಂದಿಷ್ಟು ಬಣ್ಣ ಬಳಿದು ಕೊಂಚ ಹೊಸದಾಗಿ ನೀಡುವ ಯತ್ನವನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಿದ್ದಾರೆ. ಗಣೇಶ್‌ಗೆ ನಾಯಕಿಯಾಗಿ ಪ್ರಿಯಾಮಣಿ ಅಭಿನಯವಿದೆ. ಜೈಜಗದೀಶ್, ಶರಣ್, ಶ್ರೀನಿವಾಸಮೂತಿ, ವಿಜಯಲಕ್ಷ್ಮಿ ಸಿಂಗ್, ತೇಜಸ್ವಿನಿ ಮತ್ತಿತರರು ಜತೆಗಿದ್ದಾರೆ.