ಮೊನ್ನೆ ಮೊನ್ನೆಯಷ್ಟೇ ವೈಶಾಲಿ ಕಾಸರವಳ್ಳಿಯವರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಲವು ಚಿತ್ರಗಳಲ್ಲಿ ನಾಯಕ ಹಾಗೂ ಸಹನಟನಾಗಿದ್ದ ಸ್ಫುರದ್ರೂಪಿ ಯುವಕ ನವೀನ್ ಮಯೂರ್ ನಿಧನರಾಗಿದ್ದಾರೆ.
ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಮಯೂರ್ (33) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ರಾಜಾಜಿನಗರದ ಮನೆಯಲ್ಲಿ ನಿನ್ನೆ ಸಂಜೆ ಅಸ್ತಂಗತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳ ಕೊರತೆಯಿಂದ ಮಾನಸಿಕವಾಗಿ ತೀರಾ ನೊಂದುಕೊಂಡಿದ್ದ ಮಯೂರ್ ಇತ್ತೀಚಿನವರೆಗೂ ಓಡಾಡಿಕೊಂಡಿದ್ದವರು.
PR
1978ರಲ್ಲಿ ಜನಿಸಿದ್ದ ಅವರು ಬೆಂಗಳೂರಿನ ಜಯನಗರದ ಶ್ರೀ ಕುಮಾರನ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಜೈನ್ ಕಾಲೇಜಿನಲ್ಲಿ ಬಿಬಿಎಂ ಮಾಡಿದ್ದರು. ಕಾಲೇಜು ದಿನಗಳಲ್ಲೇ ಅವರು 'ನಾನು ನೀನು' ಮುಂತಾದ ಹಲವು ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು.
ಅವರು ನಟಿಸಿದ ಮೊದಲ ಚಿತ್ರ ಸುದೀಪ್ ನಾಯಕರಾಗಿದ್ದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ'. ಈ ಚಿತ್ರದಲ್ಲಿ ಸುಧಾರಾಣಿಯವರ ಜೋಡಿಯಾಗಿ ಮಯೂರ್ ಕಾಣಿಸಿಕೊಂಡಿದ್ದರು.
ನಂತರ ದರ್ಶನ್ ನಾಯಕರಾಗಿದ್ದ 'ನಿನಗೋಸ್ಕರ', ಉಪೇಂದ್ರ ನಾಯಕರಾಗಿದ್ದ 'ಉಪ್ಪಿದಾದ ಎಂಬಿಬಿಎಸ್', ಕೂದವಳ್ಳಿ ಚಂದ್ರಶೇಖರ್ ನಿರ್ದೇಶನದ 'ಪೂರ್ವಾಪರ'ದಲ್ಲಿ ಗೀತಾರವರ ಪುತ್ರನಾಗಿ ಹೀಗೆ ಹಲವು ಚಿತ್ರಗಳಲ್ಲಿ ಸಹನಟನಾಗಿದ್ದರು.
ನಾಗಾಭರಣ ನಿರ್ದೇಶನದ 'ನೀಲಾ' ಚಿತ್ರದಲ್ಲಿ ಗಾಯತ್ರಿ ಜಯರಾಂ ಅವರ ಗೆಳೆಯನಾಗಿ ಮತ್ತು ಬಿ.ಆರ್. ಕೇಶವ್ ನಿರ್ದೇಶನದ ಪ್ರೇಮಾ ನಾಯಕಿಯಾಗಿದ್ದ 'ರಣಚಂಡಿ' ಚಿತ್ರಗಳಲ್ಲಿ ಮಯೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಉಳಿದಂತೆ ಹೊಸವರ್ಷ, ಅವನಂದ್ರೆ ಅವನೇ, ನನ್ ಹೆಂಡ್ತಿ ಕೊಲೆ, ನಲ್ಲ, ರಾಮಸ್ವಾಮಿ ಕೃಷ್ಣಸ್ವಾಮಿ, ಹಲೋ, ಪ್ರೀತಿ ಮಾಡೋ ಹುಡುಗರಿಗೆಲ್ಲ, ಶಾಂತಿ ಶಾಂತಿ ಶಾಂತಿ, ಲವ್ ಲವಿಕೆ ಮುಂತಾದ ಚಿತ್ರಗಳಲ್ಲೂ ಅವರು ನಟಿಸಿದ್ದರು.
ಅವಕಾಶಗಳಿಗಾಗಿ ತುಡಿಯುತ್ತಿದ್ದ ಮಯೂರ್, ನಟಿಸಿದ ಚಿತ್ರಗಳಲ್ಲೂ ಯಶಸ್ಸು ಸಿಗದೇ ಇದ್ದುದರಿಂದ ಮಾನಸಿಕವಾಗಿ ನೊಂದಿದ್ದರು. ಯಾವ ರೀತಿಯಿಂದ ಯತ್ನಿಸಿದರೂ ಯಶಸ್ಸು ಅವರಿಗೆ ಒಲಿಯುತ್ತಿರಲಿಲ್ಲ. ಆದರೂ ತನ್ನ ಶ್ರಮವನ್ನು ಅವರು ಬಿಟ್ಟಿರಲಿಲ್ಲ. ಬಹುಶಃ ಇದು ಅವರ ಜೀವನದಲ್ಲಿ ಮಹತ್ವದ ನಿರಾಸೆಗೆ ಕಾರಣವಾಗಿತ್ತು. ಒಳ್ಳೆ ಹುಡುಗ ಎಂದು ನಾಯಕ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.