ಗೌರಮ್ಮ, ಕುಟುಂಬ ಹಾಗೂ ದುಬೈ ಬಾಬು ಸೇರಿದಂತೆ ಉಪೇಂದ್ರ ಅವರನ್ನೇ ಹಾಕಿಕೊಂಡು ಮೂರು ಚಿತ್ರ ಮಾಡಿದ್ದ ನಿರ್ಮಾಪಕ ಶೈಲೇಂದ್ರ ಬಾಬು ಇದೀಗ ನಾಲ್ಕನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ.
ಹೌದು. ಚಿತ್ರದ ಹೆಸರು 'ರಾಜವಂಶ'. ಇದಕ್ಕೆ ಉಪೇಂದ್ರ ನಾಯಕರಲ್ಲ. ಬಾಬು ಇದೀಗ ಈ ಚಿತ್ರದ ಮೂಲಕ ಹೊಸ ನಾಯಕ ನಟನನ್ನು ಪರಿಚಯಿಸಲಿದ್ದಾರೆ. ಆತ ಬೇರಾರೂ ಅಲ್ಲ, ಖುದ್ದು ಶೈಲೇಂದ್ರರ ಮಗ ಸುಮಂತ್ ಬಾಬು. ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಇನ್ನೊಂದು ವಿಶೇಷ ಅಂದರೆ ಕನ್ನಡ ಚಿತ್ರರಂಗದ ಜನಪ್ರಿಯ 40ಕ್ಕೂ ಹೆಚ್ಚು ನಿರ್ದೇಶಕರು ಈ ಚಿತ್ರದಲ್ಲಿ ಮುಖಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಒಟ್ಟಾರೆ ಇಷ್ಟೊಂದು ಸಂಖ್ಯೆಯ ನಿರ್ದೇಶಕರನ್ನು ಹಾಕಿಕೊಂಡು ಚಿತ್ರ ಮಾಡುತ್ತಿರುವುದು ವಿಶೇಷ. ಅಲ್ಲದೇ ಮಹೇಂದರ್ ಇವರನ್ನು ಹೇಗೆ ನಿಭಾಯಿಸಿಕೊಂಡು ನಿರ್ದೇಶಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಪೋಷಕ ಪಾತ್ರಗಳ ಜತೆ ಒಬ್ಬ ಮುದ್ದು ಮೊಗದ ನಾಯಕಿಯ ಹುಡುಕಾಟ ನಡೆಯುತ್ತಿದೆ. ಗುರುಕಿರಣ್ ಸಂಗೀತ, ಬಿ.ಎ. ಮಧು ಸಂಭಾಷಣೆ ಚಿತ್ರಕ್ಕಿದೆ. ನವೆಂಬರ್ 1ಕ್ಕೆ ಸೆಟ್ಟೇರುವ ಈ ಚಿತ್ರಕ್ಕೆ ಎಲ್ಲಾ ಕಲಾವಿದರ ಆಯ್ಕೆ ಇನ್ನು ನಾಲ್ಕಾರು ದಿನದಲ್ಲಿ ಆಗಲಿದೆಯಂತೆ.