ನಟ ನವೀನ್ ಕೃಷ್ಣ ಅದೃಷ್ಟ ಖುಲಾಯಿಸಿದೆ. ಒಂದರ ಹಿಂದೊಂದು ಚಿತ್ರ ಇವರ ಪಾಲಾಗುತ್ತಿದೆ. ಸದ್ಯ ನವೀನ್ ಕೃಷ್ಣ ಕೈತುಂಬಾ ಚಿತ್ರಗಳಿದ್ದು, ಇದರ ಜತೆ ಶಂಕರನನ್ನೂ ಒಪ್ಪಿಕೊಂಡಿದ್ದಾರೆ. 'ನನಗೆ ನಾನೇ ದೇವರು' ಎಂಬ ಟ್ಯಾಗ್ಲೈನ್ ಕೂಡಾ ಈ ಚಿತ್ರದಲ್ಲಿದ್ದು, ಇದು ಇನ್ನೊಂದು ಧಿಮಾಕು ಮಾದರಿಯ ಚಿತ್ರವೇನೋ ಅಂತ ಭಾಸವಾಗುತ್ತಿದೆ ಎಂದು ಗಾಂಧಿನಗರದ ಜನ ಗುಸು ಗುಸು ಮಾತಾಡುತ್ತಿದ್ದಾರೆ.
ಆರ್. ಲಂಕೇಶ್ ಎಂಬ ನಿರ್ದೇಶಕರು. ಈ ಒಂದು ಚಿತ್ರವನ್ನು ಪಕ್ಕಾ ಕಮರ್ಷಿಯಲ್ ಆಗಿ ತರುತ್ತಿದ್ದಾರಂತೆ. ಪಿ.ಲೋಕೇಶ್ ನಿರ್ಮಾಪಕರು. ಇಬ್ಬರಿಗೂ ಇದು ಮೊದಲ ಚಿತ್ರ. ಅನುಭವಿ ನಾಯಕನ್ನು ಹಾಕಿಕೊಂಡು ಈ ಅನನುಭವಿಗಳು ನಿರ್ಮಿಸುತ್ತಿರುವ ಈ ಚಿತ್ರ ಗ್ಯಾರೆಂಟಿ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನೂ ಇರಿಸಿಕೊಂಡಿದ್ದಾರಂತೆ.
ಆಕ್ಷನ್ ಕಂ ಲವ್ ಸ್ಟೋರಿಯಲ್ಲಿ ಚಿಂದಿ ಆಯುವ ಹುಡುಗನಾಗಿ ನವೀನ್ ಕಾಣಿಸಿಕೊಳ್ಳುತ್ತಾರೆ. ಸಮಾಜವನ್ನು ಕಾಡುತ್ತಿರುವ ಅನಿಷ್ಠ, ತೊಡಕನ್ನು ಇವರು ಏಕಾಂಗಿಯಾಗಿ ಹೋರಾಡಿ ಹೇಗೆ ತೊಡೆದುಹಾಕುತ್ತಾರೆ ಎನ್ನುವುದು ಚಿತ್ರದ ಒಂದು ಲೈನ್ ಸ್ಟೋರಿ.
ಚಿತ್ರದ ನಾಯಕಿಯ ಆಯ್ಕೆ ಆಗಬೇಕಿದೆಯಂತೆ. ಕೆಲ ಜನಪ್ರಿಯ ನಾಯಕಿಯರನ್ನು ಸಂಪರ್ಕಿಸಲಾಗಿದೆಯಂತೆ. ಆದರೆ ಅಂತಿಮ ಆಯ್ಕೆ ಆಗಬೇಕಿದೆ ಅಷ್ಟೆ. ಹೊಸ ನಾಯಕಿಯರ ಪರಿಚಯವೂ ಆಗಬಹುದು ಎನ್ನಲಾಗುತ್ತಿದೆ.
ಚಿತ್ರದಲ್ಲಿ ಬರುವ ಮುಖ್ಯಮಂತ್ರಿ ಪಾತ್ರಕ್ಕೆ ಪ್ರಕಾಶ್ ರೈ ಅವರನ್ನು ಅಭಿನಯಿಸುವಂತೆ ಕೋರಲಾಗಿದೆ. ಅವರಿನ್ನೂ ಒಪ್ಪಿಕೊಂಡಿಲ್ಲವಂತೆ. ಚಿತ್ರಕ್ಕೆ ರಾಜ್ ಸಂಗೀತ ಹಾಗೂ ತಿರುಮಲ ಅವರ ಛಾಯಾಗ್ರಹಣ ಇದೆ. ಹುಬ್ಬಳ್ಳಿ ಹಾಗೂ ಬಳ್ಳಾರಿಯಲ್ಲಿ 60 ದಿನ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳುತ್ತಿದೆ ಚಿತ್ರತಂಡ.