ಒಂದೆಡೆ, ಗುರು ರಾಘವೇಂದ್ರರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯವೇ ಶಿರಡಿ ಸಾಯಿಬಾಬಾ ಸಹ ಆರಂಭವಾಗಲಿದೆ. ಈ ನಡುವೆ ತ್ರಿವಿದ ದಾಸೋಹಿ ಎಂದೇ ಪ್ರಖ್ಯಾತರಾಗಿರುವ ಶತಾಯುಷಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಕೂಡಾ ಬರಲು ಸಜ್ಜಾಗಿದ್ದಾರೆ.
ಹೌದು. ಇದೆಲ್ಲಾ ಕಿರುತೆರೆ ಸುದ್ದಿ. ಇಂದು ಕಿರುತೆರೆಯಲ್ಲಿರುವ ಭಾರೀ ಸ್ಪರ್ಧೆಯ ಫಲವಿದು. ನಿಜ ಹೇಳಬೇಕೆಂದರೆ ಕಿರುತೆರಯಲ್ಲಿ ಈ ಸ್ಪರ್ಧೆಯಿಂದ ಧಾರ್ಮಿಕ ಶಕೆ ಆರಂಭವಾಗಿದೆ. ಇದುವರೆಗೂ ಕೇವಲ ದೇವರ ಹೆಸರಲ್ಲಿ ಹೆದರಿಸುವ, ಅದೂ ಇದು ಅನಗತ್ಯ ಅರಚಾಟಕ್ಕೆ ಸೀಮಿತವಾದ ಟಿವಿಗಳಿಂದ ಬೇಸತ್ತು ಹೋಗಿದ್ದ ಜನರಿಗೆ ಇದೀಗ ಅರಂಭವಾಗಿರುವ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಮನರಂಜನೆ ನೀಡಲಿವೆ ಎಂದರೆ ತಪ್ಪಾಗಲಾರದು.
ಇದೀಗ ಸಿದ್ಧಗಂಗಾ ಶ್ರೀಗಳನ್ನು ಪರಿಚಯಿಸಲು ಹೊರಟಿರುವುದು ಉದಯ ವಾಹಿನಿ. ವಿಶೇಷ ಅಂದರೆ, ಉದ್ಯಮಿ ಅಶೋಕ್ ಖೇಣಿ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ. ಜನಪ್ರಿಯ ಟಿವಿ ನಿರೂಪಕ ದೀಪಕ್ ತಿಮ್ಮಯ್ಯ ಇದರ ನಿರ್ದೇಶಕರು.
ಸ್ವಾಮೀಜಿಗಳ ಹಿನ್ನಲೆ, ಬಾಲ್ಯ, ವಿದ್ಯಾಭ್ಯಾಸ, ದೀಕ್ಷೆ, ಸಾಧನೆ, ಮಠದ ಬೆಳವಣಿಗೆಯಲ್ಲಿ ಪಾತ್ರ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡು ಸಾಕಷ್ಟು ಕಂತುಗಳಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ. ಧಾರಾವಾಹಿಗೆ ಪ್ರವೀಣ್ ಡಿ. ರಾವ್ ಸಂಗೀತ ನೀಡಿದ್ದಾರೆ. ಅಕ್ಟೋಬರ್ 10ರಿಂದ ಧಾರವಾಹಿ ಪ್ರತಿ ಭಾನುವಾರ ಬೆಳಗ್ಗೆ 9ಕ್ಕೆ ಪ್ರಸಾರವಾಗಲಿದೆ.