ಅಪ್ಪ ಜಗ್ಗೇಶ್ ಹೆಸರಿನ ಬಲದ ಮೇಲೆ ನಾಯಕನಾದರೂ, ಮೊದಲ ಚಿತ್ರ ಗಿಲ್ಲಿಯಲ್ಲಿ ಎಡವಿ ಬಿದ್ದ ಗುರುರಾಜ್ ಮತ್ತೊಂದು ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಗುರುರಾಜ್ ಮತ್ತೊಂದು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.
ಹೌದು. ಗುರುರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೂಲ್ ಚಿತ್ರದ ಗೊಂದಲದಿಂದ ನಿರಾಳವಾಗಿರುವ ಮುಸ್ಸಂಜೆ ಮಹೇಶ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಜಗ್ಗೇಶ್ ಅವರ ಪುತ್ರ ಗುರುರಾಜ್ ಇದರ ನಾಯಕ. ಹೀಗಾಗಿ ಈ ಬಾರಿಯಾದರೂ ಗುರುರಾಜ್ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕೆಂದೋ ಏನೋ, ಭರ್ಜರಿ ಹೆಸರಿನ ತಲಾಶ್ ಮಾಡಿದ ಚಿತ್ರತಂಡ ಚಿತ್ರಕ್ಕೀಗ 'ಹಳ್ಳಿಯಾದರೇನು ಶಿವಾ' ಎಂದು ಹೆಸರಿಟ್ಟಿದ್ದಾರೆ. ಗಿಲ್ಲಿ ಚಿತ್ರ ಕೈಕೊಟ್ಟಿದ್ದರಿಂದ ಒಂದಿಷ್ಟು ಅಭಿನಯ ಕಲಿತು ಬರಲು ತೆರಳಿದ್ದ ಗುರುರಾಜ್ ಮರಳಿದ್ದಾರೆ. ಸಾಕಷ್ಟು ಅಭಿನಯ ತರಬೇತಿ ಅವರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.
ಹಳೆಯ ಚಿತ್ರದ ಹೆಸರು ಹಾಗೂ ಹಾಡಿನ ಪದ ಬಳಸಿಕೊಂಡು ಚಿತ್ರ ಮಾಡುವುದು ಇದೀಗ ಹುಟ್ಟಿಕೊಂಡ ಹೊಸ ಟ್ರೆಂಡ್. ಮುಸ್ಸಂಜೆ ಮಹೇಶ್ ಕೂಡಾ ಅದೇ ಹಾದಿ ತುಳಿದಿದ್ದಾರೆ. ಇದೇ ತಿಂಗಳ 17ರಂದು ಚಿತ್ರದ ಮುಹೂರ್ತ ನಡೆಯಲಿದೆ. ಆರ್.ಎಸ್. ಗೌಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರು ಕೇಳಿದ ಮೇಲೆ ಪಟ್ಟಣದ ಚಿತ್ರ ಅಗಲು ಸಾಧ್ಯವೇ ಇಲ್ಲ. ಇದು ಹಳ್ಳಿ ಹಿನ್ನೆಲೆ ಉಳ್ಳ ಚಿತ್ರವಾಗಿದೆ. ಶಿವಣ್ಣನ ಮಹಾಶಿವರಾತ್ರಿ ಚಿತ್ರ ಮಾಡುತ್ತಿರುವ ಮಹೇಶ್ ಏನೋ ಒಂಥರಾ ಚಿತ್ರವನ್ನು ಕೂಡಾ ನಿರ್ದೇಶಿಸಿದ್ದಾರೆ. ಸುದೀಪ್- ರಮ್ಯಾ ಅಭಿನಯದ ಮುಸ್ಸಂಜೆ ಮಾತು ಕೂಡಾ ಇವರ ನಿರ್ದೇಶನದ ಚಿತ್ರ.
ಇನ್ನೊಂದೆಡೆ ಜಗ್ಗೇಶ್ ಮಗನಿಗಾಗಿ ಹೋಂ ಬ್ಯಾನರ್ ಅಡಿ ಚಿತ್ರವೊಂದನ್ನು ನಿರ್ಮಿಸುತ್ತಾರಂತೆ. ಅದರ ಕೆಲಸ ಸದ್ದಿಲ್ಲದೇ ಸಾಗಿದೆ. ಈ ಚಿತ್ರವನ್ನು ಮಠ ಖ್ಯಾತಿಯ ಗುರುಪ್ರಸಾದ್ ನಿರ್ದೇಶಿಸುತ್ತಾರೆ ಎಂಬ ಗಾಳಿ ಸುದ್ದಿಯೂ ಇದೆ. ಕಾಲ ಕೂಡಿ ಬರಲು ಕಾಯಬೇಕು ಬಿಡಿ.