ಎಂದಿರನ್ ಜೊತೆಗೇ ಬಿಡುಗಡೆಯಾಗುತ್ತದೆ ಎಂದು ಬಹು ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ರಾಧಿಕಾ ಪಂಡಿತ್- ತರುಣ್ ಜೋಡಿಯ 'ಗಾನಾ ಬಜಾನಾ' ಇನ್ನಷ್ಟು ತಡವಾಗಿ ತೆರೆಗೆ ಬರಲಿದೆ. ಇದಕ್ಕೆ ಯಾವುದೇ ತಾಂತ್ರಿಕ ದೋಷವಾಗಲಿ, ಚಿತ್ರದಲ್ಲಿ ಕೊರತೆಯಾಗಲಿ ಕಾಡಿ ಮುಂದೆ ಹೋಗಿದ್ದಲ್ಲ, ಬದಲಾಗಿ ಅನಗತ್ಯವಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದರಿಂದ ಮುಂದೆ ಹೋಗಿದೆ. ಇದೇ ವಾರ ತೆರೆ ಕಾಣಬೇಕಿದ್ದ ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ.
ಇದಕ್ಕೆ ನಿರ್ದೇಶಕ ಪ್ರಶಾಂತ್ ರಾಜ್ ನೀಡುವ ಕಾರಣಗಳು ಎರಡು. ಒಂದು ಇದೇ ವಾರ ಎರಡು ಪ್ರಮುಖ ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದಕ್ಕೆ ಮೂರನೇ ಚಿತ್ರವಾಗಿ ಬಿಡುಗಡೆ ಮಾಡಿದರೆ ಸ್ಪರ್ಧೆಯಲ್ಲಿ ಜನ ಇದನ್ನು ಒಪ್ಪಿಕೊಳ್ಳುತ್ತಾರೆ ಎನ್ನಲಾಗದು. ತಿರಸ್ಕರಿಸಿದರೆ ಒಂದು ಉತ್ತಮ ಚಿತ್ರಕ್ಕೆ ನ್ಯಾಯ ಸಿಗುವುದಿಲ್ಲ. ನಮ್ಮ ಶ್ರಮ ವ್ಯರ್ಥವಾಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದೇವೆ. ಎರಡನೆಯದಾಗಿ ಈ ಎರಡು ಹೊಸ ಚಿತ್ರದ ಜೊತೆಗೆ ಈಗಾಗಲೇ ಪಂಚರಂಗಿ, ಜೊತೆಗಾರ, ಕೃಷ್ಣನ್ ಲವ್ ಸ್ಟೋರಿ ಓಡುತ್ತಿದವೆ. ಅಲ್ಲದೆ, ಪರಭಾಷಾ ಚಿತ್ರ ಎಂದಿರನ್ ಅಬ್ಬರ ಕೂಡಾ ಜೋರಾಗಿಯೇ ಇದೆ. ಇವೆಲ್ಲವುಗಳ ನಡುವೆ ಉತ್ತಮ ಚಿತ್ರ ಮಂದಿರ ಸಿಗುವುದು ಕೂಡಾ ಕಷ್ಟ ಎನ್ನುತ್ತಾರೆ.
ಈ ಎಲ್ಲಾ ಕಾರಣದಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದೇವೆ. ಜನ ಮೆಚ್ಚುವ ಉತ್ತಮ ಪ್ರೇಮಕಥೆಯನ್ನು ನಿರ್ಮಿಸಿದ್ದೇವೆ. ಇದನ್ನು ಒಪ್ಪಿಕೊಳ್ಳದಿದ್ದರೆ ನಷ್ಟ ಅನ್ನುವುದಕ್ಕಿಂತ ಸಹೃದಯ ಚಿತ್ರಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದರೆ ಉತ್ತಮ. ಚಿತ್ರ ನಿರ್ಮಿಸುವ ಆಸಕ್ತಿಯೂ ಹೊರಟು ಹೋಗುತ್ತದೆ ಎನ್ನುವುದು ಅವರ ಹೇಳಿಕೆ.
ಆದರೆ, ಅಸಲಿ ವಿಷಯ ಬೇರೆಯೇ ಇದೆ. ಚಿತ್ರದ ನಿರ್ಮಾಪಕರು ಇವರ ಅಣ್ಣನೇ. ಅಣ್ಣ ತಮ್ಮ ಸೇರಿ ಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈಗಿರುವ ಸ್ಪರ್ಧೆಯಲ್ಲಿ ಚಿತ್ರ ಬಿಡುಗಡೆ ಆದರೆ ಜನ ನೋಡದೇ ತೋಪಾದರೆ ಎಂಬ ದಿಗಿಲು ಇರುವುದರಿಂದ ಒಂದೆರಡು ವಾರ ಬಿಟ್ಟು ನೋಡೋಣ ಅಂತ ಸುಮ್ಮನಾಗಿದ್ದಾರೆ ಅನ್ನುತ್ತಿದೆ ಗಾಂಧಿನಗರ.