ಪತ್ರಕರ್ತ ಕೃಷ್ಣ ಬೆಳ್ತಂಗಡಿ ಬಹುಬೇಗನೆ ತಮ್ಮ ಚೊಚ್ಚಲ ಚಿತ್ರ ಬಣ್ಣದ ಕೊಡೆಯ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಪತ್ರಕರ್ತರಾಗಿದ್ದ ಇವರು ಏಕಾಏಕಿ ಚಿತ್ರರಂಗಕ್ಕೆ ಇಳಿದು, ನಿರ್ದೇಶಕರಾಗಿ ಇದೀಗ ಬಣ್ಣದ ಕೊಡೆ ಎಂಬ ಒಂದು ಸಹೃದಯ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಚಿತ್ರದ ಚಿತ್ರೀಕರಣ ಭಾಗ ಕಳೆದ ವಾರ ಪೂರ್ಣಗೊಂಡಿದ್ದು, ಉಳಿದ ಒಂದಿಷ್ಟು ಕೆಲಸ ಆರಂಭವಾಗಿದೆ. ಇದೇ ವೇಗದಲ್ಲಿ ತಾಂತ್ರಿಕ ಕಾರ್ಯಗಳೂ ಮುಗಿದು ಚಿತ್ರ ಬಹುಬೇಗನೆ ಬಿಡುಗಡೆ ಭಾಗ್ಯ ಕಾಣಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ಚಿತ್ರದಲ್ಲಿ ಪತ್ರಕರ್ತ ಹಾಗೂ ನಟ ಯತಿರಾಜ್ ಅಭಿನಯ ಅತ್ಯುತ್ತಮವಾಗಿ ಬಂದಿದೆಯಂತೆ. ಪುಟಾಣಿ ಸುಹಾಸಿನಿ ಚಿತ್ರದ ಇನ್ನೊಂದು ಪಿಲ್ಲರ್ ಅನ್ನಲಾಗುತ್ತಿದೆ. ಒಂದು ವ್ಯವಸ್ಥಿತ ರೀತಿ ಚಿತ್ರ ಮೂಡಿಬಂದಿದ್ದು, ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಚಿತ್ರ ತಂಡದ್ದು.
ಪುಟಾಣಿ ಹುಡುಗಿಯೊಬ್ಬಳು ಬಣ್ಣದ ಛತ್ರಿಗೆ ಅಸೆ ಪಡುವುದು, ತಾಯಿಯಿಂದ ಅದನ್ನು ಕೊಡಿಸಲಾಗದೇ ಹೋಗುವುದು, ಇದಕ್ಕೆ ಅವಳ ತಂದೆಯೇ ಕಾರಣವಾಗುವುದು ಚಿತ್ರದ ಒಂದೆಳೆಯ ಕಥೆ. ಬೇಬಿ ಸುಹಾಸಿನಿ ಈ ಚಿತ್ರದಲ್ಲಿ ವಿಶಿಷ್ಟವಾಗಿ ನಟಿಸಿದ್ದು, ಈ ಚಿತ್ರದಲ್ಲಿ ಮುಂಬೈ ಮೂಲದ ನಟಿ ಮೋಹಿನಿ ಹಾಗೂ ಯತಿರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ಸಹನಟನಾಗಿ, ಪೋಷಕ ನಟನಾಗಿ ನಟಿಸಿದ್ದ ಇವರು ಈ ಮೂಲಕ ಭಡ್ತಿ ಪಡೆದಿದ್ದಾರೆ.
ಬಡತನವನ್ನು ಈ ಚಿತ್ರದಲ್ಲಿ ವೈಭವೀಕರಿಸಲಾಗಿದೆ. ಹೀಗಾಗಿ ಚಿತ್ರದಲ್ಲಿ ಮಾತು ಕಡಿಮೆ ಇದೆ. ಸಂಭಾಷಣೆಗೆ ಇಲ್ಲಿ ಹೆಚ್ಚು ಅವಕಾಶ ಇಲ್ಲ. ಅಭಿನಯಕ್ಕೆ ಹೆಚ್ಚಿನ ಪೋಷಣೆ ನೀಡಲಾಗಿದೆಯಂತೆ. ಹಾಗಂತ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಡಿ. ಅಲ್ಲದೇ ಇದು ಪೂರ್ಣ ಕಮರ್ಷಿಯಲ್ ಚಿತ್ರವೂ ಅಲ್ಲ. ಎರಡನ್ನೂ ಒಳಗೊಂಡು ವಿಭಿನ್ನ ಶೈಲಿಯ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಿತ್ರ ಬಿಡುಗಡೆಯ ನಂತರವೇ ಉತ್ತರ ಸಿಗುತ್ತದೆ ಬಿಡಿ.