ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೇಲೆ ಜಾದೂ ಮಾಡಿದ ಯೋಗರಾಜ ಭಟ್ ಮುಂಗಾರು ಮಳೆಯ ನಂತರ ಯಾವ ನಟನಿಗೂ ಕಮ್ಮಿ ಇಲ್ಲದಂಥ ಸ್ಟಾರ್ ವ್ಯಾಲ್ಯೂ ದಕ್ಕಿದೆ. ನಿರ್ದೇಶಕರೂ ಕೂಡಾ ನಟನಷ್ಟೇ ಪ್ರೇಕ್ಷಕನ ಮೇಲೆ ಮೋಡಿ ಮಾಡಬಹುದು ಎಂಬುದಕ್ಕೆ ಸ್ವತಃ ಯೋಗರಾಜ ಭಟ್ಟರೇ ಸಾಕ್ಷಿ. ಈ ಯೋಗರಾಜ ಭಟ್ಟರು ತಮ್ಮ ವಿಶಿಷ್ಟ ಡೈಲಾಗುಗಳ ಮೂಲಕ ತಮ್ಮ ಚಿತ್ರದಲ್ಲಿ ಮನರಂಜನೆಯ ಚಿತ್ತಾರವೇ ಬಿಡಿಸಿದಂತೆ, ಇತರರ ಹಲವು ಚಿತ್ರಗಳಿಗೆ ಹಾಡು ಬರೆಯುವ ಮೂಲಕ ಚಿತ್ರರಂಗದ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರು.
ಮುಂಗಾರು ಮಳೆಯಲ್ಲಿ 'ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...' ಎಂಬ ಅಪ್ಪಟ ಭಾವಪೂರ್ಣ ಹಾಡು ಬರೆದ ಯೋಗರಾಜ ಭಟ್ಟರ ಕೈಯಲ್ಲಿ ಪೆನ್ನು ಹೇಗೆ ಬೇಕಾದರೂ ತಿರುಗುತ್ತದೆ ಎಂಬುದಕ್ಕೆ ಅವರ ಹಳೇ ಪಾತ್ರೆ ಹಳೇ ಕಬ್ಣ..., ಹೊಸ ಗಾನಾ ಬಜಾನಾ..., ಲೈಫು ಇಷ್ಟೇನೇ... ಮತ್ತಿತರ ಹಾಡುಗಳೇ ಸಾಕ್ಷಿ. ಇದೀಗ ಗೀತ ಸಾಹಿತ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಯೋಗರಾಜ ಭಟ್ಟರಿಗೆ ತಮ್ಮ ನಿರ್ದೇಶನಕ್ಕಿಂತಲೂ ಹೆಚ್ಚು ಬೇಡಿಕೆಯಲ್ಲಿರುವುದು ಅವರ ಗೀತೆಗಳಿಗೇ ಎಂಬುದಕ್ಕೆ ಅವರಿಗೇ ಸ್ವತಃ ಕೌತುಕವಾಗಿದೆಯಂತೆ!
ಹೌದು, ಈ ಗುರುವಾರ ಮತ್ತೆ ಭಟ್ಟರಿಗೆ ಸಂಭ್ರಮದ ಗಳಿಗೆ. ಕಾರಣ ಭಟ್ಟರ ಕುಚುಕೂ ಗೆಳೆಯ ಸೂರಿ ನಿರ್ದೇಶನದ ಜಾಕಿ ಬಿಡುಗಡೆ ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಈ ಚಿತ್ರದ ಎಲ್ಲ ಹಾಡುಗಳೂ ಜನ್ಮ ತಳೆದಿದ್ದು ಭಟ್ಟರ ಲೇಖನಿಯಲ್ಲಿ. ಈಗಾಗಲೇ, ಹಾಡುಗಳೆಲ್ಲವೂ ಭರ್ಜರಿ ಹಿಟ್ ಆಗಿವೆ. ಸಾಮಾನ್ಯವಾಗಿ ಚಿತ್ರವೊಂದರಲ್ಲಿ ಒಂದೋ, ಎರಡೋ ಹಾಡುಗಳಷ್ಟೇ ಹಿಟ್ ಆಗುತ್ತವೆ. ಆದರೆ, ಈ ಜಾಕಿಯಲ್ಲಿ ಎಲ್ಲಾ ಹಾಡುಗಳೂ ಕೂಡಾ ಭರ್ಜರಿ ಹಿಟ್ ಆಗಿ ಎಲ್ಲೆಡೆ ಸದ್ದು ಮಾಡುತ್ತಿವೆ.
ಯಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ..., ಯಡವಟ್ಟಾಯ್ತು..., ಜಾಕಿ ಜಾಕಿ ಜಾಕಿ ಜಾಕಿ..., ಶಿವಾ ಅಂತ ಹೋಗುತ್ತಿದ್ದೆ... ಮತ್ತಿತರ ಎಲ್ಲಾ ಹಾಡುಗಳು ಈಗ ಹಾದಿ ಬೀದಿಯಲ್ಲಿ ರಿಂಗಿಣಿಸುತ್ತಿದೆ. ಈಗಾಗಲೇ ಈ ಹಾಡುಗಳ ಮೂಲಕ ಜನರಿಗೆ ಭಟ್ಟರ ಹಾಡುಗಳ ಕ್ರೇಜ್ ಹೆಚ್ಚಾಗಿದೆ. ಚಿತ್ರ ಬಿಡುಗಡೆಯ ನಂತರ ಇದು ಇನ್ನೂ ಎತ್ತರಕ್ಕೇರುವ ಎಲ್ಲ ಸಂಭವವೂ ಇದೆ.
ಭಟ್ಟರು ಅಂದು ಜಂಗ್ಲಿಗೆ ಹಾಡು ಬರೆಯುತ್ತಿದ್ದಾಗ ಇವರ ರೇಟು 40 ಸಾವಿರ ಇತ್ತು. ಆದರೆ ಪಂಚರಂಗಿ, ಜಾಕಿ ನಂತರ ಒಂದೂವರೆ ಲಕ್ಷಕ್ಕೇರುವ ದಿನ ದೂರವಿಲ್ಲ. ಕೇವಲ ಹಾಡಿನಿಂದಲೇ ಭಟ್ಟರು ಗೆದ್ದಿದ್ದಾರೆ ಅನ್ನುವ ಮಾತೂ ಈಗೀಗ ಕೇಳಿ ಬರುತ್ತಿದೆ. ಒಟ್ಟಾರೆ, ಈಗೇನಿದ್ದರೂ, ಭಟ್ಟರ ಜಮಾನಾ ಬಿಡಿ. ಭಟ್ಟರಿಗೆ ಒಳ್ಳೆಯದಾಗಲಿ.