ಜನಪ್ರಿಯ ಚಿತ್ರ ನಿರ್ದೇಶಕ ಎಸ್. ಉಮೇಶ್ ಸದ್ದಿಲ್ಲದೇ ಒಂದು ಚಿತ್ರ ಸಿದ್ಧಪಡಿಸಿದ್ದಾರೆ. ಅದರ ಧ್ವನಿ ಸುರುಳಿಯೂ ಇತ್ತೀಚೆಗೆ ಬಿಡುಗಡೆ ಆಗಿದೆ.
ಹೌದು, ಅವಳೇ ನನ್ನ ಹೆಂಡ್ತಿ, ಅವನೇ ನನ್ನ ಗಂಡ, ತುಂಬಿದ ಮನೆ ಮತ್ತಿತರ ಚಿತ್ರಗಳನ್ನು ಮಾಡಿ ಯಶಸ್ವಿಯಾಗಿರುವ ಉಮೇಶ್ ಇದೀಗ ಪ್ರೀತಿ, ಪ್ರೇಮ, ಸೆಂಟಿಮೆಂಟ್ ವಿಷಯವನ್ನು ಇರಿಸಿಕೊಂಡು 'ನೆನೆಯುವೆ ನಿನ್ನ' ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಕೆಲಸ ಬಹುತೇಕ ಮುಗಿದಿದ್ದು, ಇತ್ತೀಚೆಗೆ ಧ್ವನಿ ಸುರುಳಿಯೂ ಹೊರ ಬಿದ್ದಿದೆ. ಲಹರಿ ಸಂಸ್ಥೆ ಮೂಲಕ ಹೊರ ಬಂದಿರುವ ಈ ಧ್ವನಿಸುರುಳಿಯಲ್ಲಿ ಎಲ್ಲಾ ಹಾಡುಗಳೂ ಅಪ್ಯಾಯಮಾನವಾಗಿದ್ದು, ಗೆಲ್ಲುವ ಎಲ್ಲಾ ಅರ್ಹತೆಯನ್ನು ಹೊಂದಿವೆ ಎನ್ನಲಾಗುತ್ತಿದೆ.
ಇದು ಇವರ ನಿರ್ದೇಶನದ 20ನೇ ಚಿತ್ರ. ಮೊದಲ ಚಿತ್ರ ಅವಳೇ ನನ್ನ ಹೆಂಡ್ತಿ ಇಂದಲೂ ಒಂದು ವಿಭಿನ್ನ ಕಥೆ ಹೊಂದಿರುವ ಚಿತ್ರ ಸಿದ್ಧಪಡಿಸುತ್ತಾ ಬಂದಿರುವ ಇವರು ಇದೀಗ ಈ ಚಿತ್ರದ ಮೂಲಕವೂ ಒಂದು ಉತ್ತಮ ಸಾರಯುಕ್ತ ಸಂದೇಶ ನೀಡಲು ನಿರ್ಧರಿಸಿದ್ದಾರೆ. ಇನ್ನೊಂದು ಸತ್ಯ ಸಂಗತಿ ಎಂದರೆ ಸದ್ದಿಲ್ಲದೇ ಸಿದ್ಧವಾಗಿರುವ ಚಿತ್ರಕ್ಕೆ ಬರೋಬ್ಬರಿ 2 ವರ್ಷ ಹಿಡಿದಿದೆಯಂತೆ. ವಿಳಂಬ ಆಗಿದೆ ನಿಜ. ಆದರೆ, ಅದಕ್ಕೆ ನೂರಾರು ಕಾರಣಗಳಿವೆ ಎನ್ನುತ್ತಾರೆ ಉಮೇಶ್.
ಚಿತ್ರದ ಚಿತ್ರೀಕರಣ ಕುಶಾಲನಗರ, ಪಿರಿಯಾಪಟ್ಟಣ ಹಾಗೂ ಬೆಂಗಳೂರು ಸುತ್ತ 4 ಹಂತದಲ್ಲಿ ಅಂದರೆ 27 ದಿನ ಚಿತ್ರೀಕರಣಗೊಂಡಿದೆ. ಈ ಸಂದರ್ಭದಲ್ಲಿ ನಾಲ್ಕು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವೂ ಸೇರಿದೆ. ಇನ್ನೊಂದು ಹಾಡು ಸಿದ್ಧವಾಗಬೇಕಿದ್ದು, ಅದರ ಸಿದ್ಧತೆ ಭರದಿಂದ ಸಾಗಿದೆ. ಅದು ಮುಗಿದರೆ ಒಂದಿಷ್ಟು ಸಣ್ಣಪುಟ್ಟ ಅಂತಿಮ ಹಂತದ ಕೆಲಸ ಆಗಬೇಕು.
ಚಿತ್ರದ ಉಳಿದಿರುವ ಒಂದು ಹಾಡಿನ ಚಿತ್ರೀಕರಣ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆಯಂತೆ. ಕರುಣಾಕರ್ ಚಿತ್ರದ ನಾಯಕ. ಪಕ್ಕದ್ಮನೆ ಹುಡುಗಿ ಚಿತ್ರದ ನಾಯಕಿ ರಂಜಿತಾ ಹಾಗೂ ಜಾಹ್ನವಿ ಚಿತ್ರದ ನಾಯಕಿಯರು. ಹಳ್ಳಿ ಹಾಗೂ ನಗರದಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆ ಆಧರಿಸಿದ ಚಿತ್ರ ಇದಾಗಿದೆ.